ಪಿಡಿಒ,ಕಂಪ್ಯೂಟರ್‌ ಆಪರೇಟರ್‌ಗಳ ಕಾರ್ಯವೈಖರಿ: ಶಾಸಕರ ಕಿಡಿ

| Published : Dec 19 2023, 01:45 AM IST

ಪಿಡಿಒ,ಕಂಪ್ಯೂಟರ್‌ ಆಪರೇಟರ್‌ಗಳ ಕಾರ್ಯವೈಖರಿ: ಶಾಸಕರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ರಾಪಂ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ತಾಲೂಕಿನ ವೀರಪಸಮುದ್ರ ಹಾಗೂ ಸಿ.ಕೆ.ಪುರ, ರಾಜವಂತಿ ಪಿಡಿಒ ಮತ್ತು ಕಂಪ್ಯೂಟರ್‌ ಆಪರೇಟರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಾಜಕೀಯ ಹಸ್ತಕ್ಷೇಪ ಮಾಡದೇ ಅರ್ಹರಿಗೆ ಸೌಲಭ್ಯ ಒದಗಿಸಲು ಶಾಸಕ ವೆಂಕಟೇಶ್ ತಾಕೀತು

ಕನ್ನಡಪ್ರಭ ವಾರ್ತೆ ಪಾವಗಡ

ಹಣ ವಸೂಲಾತಿಯ ಹಿನ್ನೆಲೆಯಲ್ಲಿ ಕಂಪ್ಯೂಟರ್‌ ಆಪರೇಟರ್‌ಗೆ ಅಧಿಕಾರ ನೀಡಿದ ಪರಿಣಾಮ ಗ್ರಾಪಂಗಳು ಹಾಳಾಗಿವೆ. ಗ್ರಾಪಂ ನಿಮ್ಮ ಅಪ್ಪಂದಿರ ಆಸ್ತಿಯಲ್ಲ, ರಾಜಕೀಯ ಹಸ್ತಕ್ಷೇಪ ಮಾಡದೇ ಅರ್ಹರಿಗೆ ಸೌಲಭ್ಯ ಸಿಗುವ ರೀತಿ ನ್ಯಾಯ ಸಮ್ಮತವಾಗಿ ಯೋಜನೆ ರೂಪಿಸಿ ಎಂದು ಶಾಸಕ ಎಚ್‌.ವಿ. ವೆಂಕಟೇಶ್‌ ಅವರು ಪಿಡಿಒ ಮತ್ತು ಕಂಪ್ಯೂಟರ್‌ ಆಪರೇಟರ್‌ಗಳ ಕಾರ್ಯವೈಖರಿಗೆ ಕಿಡಿಕಾರಿದ್ದಾರೆ.ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ರಾಪಂ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ತಾಲೂಕಿನ ವೀರಪಸಮುದ್ರ ಹಾಗೂ ಸಿ.ಕೆ.ಪುರ, ರಾಜವಂತಿ ಪಿಡಿಒ ಮತ್ತು ಕಂಪ್ಯೂಟರ್‌ ಆಪರೇಟರ್‌ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಈ ವೇಳೆ ಗ್ರಾಪಂ ಅಭಿವೃದ್ಧಿಯಲ್ಲಿ ರಾಜಕೀಯ ತಾರತಮ್ಯ ಮಾಡುತ್ತಿರುವ ಬಗ್ಗೆಯೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಹಣ ವಸೂಲಾತಿ ಮಾಡಿಕೊಡುವ ಹಿನ್ನೆಲೆಯಲ್ಲಿ ಪಿಡಿಒಗಳು ಡಮ್ಮಿಯಾಗಿದ್ದು ಕಂಪ್ಯೂಟರ್‌ ಆಪರೇಟರ್‌ಗಳ ದರ್ಬಾರ್‌ನಿಂದ ನರೇಗಾ ಸೇರಿದಂತೆ ಗ್ರಾಪಂ ಯೋಜನೆಗಳು ಕೂಲಿಕಾರರು ಮತ್ತು ಅರ್ಹ ಫಲಾನುಭವಿಗಳಿಗೆ ಸಿಗದೇ ವಂಚಿತರಾಗಿದ್ದಾರೆ. ವಿವಿಧ ಯೋಜನೆ ಅಭಿವೃದ್ಧಿ ದುರುಪಯೋಗ ಹಾಗೂ ಕೆಲಸಗಳಿಗೆ ಗ್ರಾಮೀಣ ಜನತೆಯಿಂದ ಹಣ ಸೂಲಿಗೆ ಮಾಡುತ್ತಿರುವ ಕಾರಣ ಇಂದು ಗ್ರಾಪಂ ಪಿಡಿಒ ಹಾಗೂ ಬಹುತೇಕ ಕಂಪ್ಯೂಟರ್‌ ಆಪರೇಟರ್‌ಗಳು ಇಂದು ಶ್ರೀಮಂತರಾಗಿದ್ದಾರೆ. ಮೊದಲು ಅತಿ ಭ್ರಷ್ಟಾಚಾರದ ದೂರು ಕೇಳಿಬಂದಿರುವ ತಾಲೂಕಿನ ವಿರುಪಸಮುದ್ರ ಸಿ.ಕೆ.ಪುರ,ರಾಜವಂತಿ ಗ್ರಾಪಂ ಸಮಗ್ರ ವಿವಿಧ ಯೋಜನೆಯ ಪ್ರಗತಿ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ತಾಪಂ ಇಒ ಜಾನಕಿ ರಾಮ್‌ಗೆ ತಾಕೀತು ಮಾಡಿದರು.

ತಾಲೂಕಿನ ವಿರುಪಮುದ್ರ ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ಮಧುರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಯೋಜನೆಯ ಅನುಷ್ಠಾನದಲ್ಲಿ ಹಸ್ತಕ್ಷೇಪದಿಂದ ಅರ್ಹರಿಗೆ ಸೌಲಭ್ಯ ಸಿಗುತ್ತಿಲ್ಲ. ಗ್ರಾಪಂನಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಎಂದು ತಾರತಮ್ಯ ಮಾಡುವುದು ಸರಿಯಲ್ಲ. ತಾಕತ್ತಿದ್ದರೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ರಾಜಕೀಯ ಅಖಾಡಕ್ಕೆ ಬನ್ನಿ, ಅದು ಬಿಟ್ಟು ಗ್ರಾಪಂ ಯೋಜನೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.ಓಬಳಾಪುರದಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ಅಲಿಸಿದ ಶಾಸಕರು, ಪೈಪ್‌ಲೈನ್‌ ಕಾಮಗಾರಿಗೆ ಅನುದಾನ ಕಲ್ಪಿಸುವ ಭರವಸೆ ನೀಡಿ ಗ್ರಾಪಂ ಪ್ರಗತಿ ಕುರಿತು ಪಿಡಿಒ ದಾದಲೂರಪ್ಪರಿಂದ ವಿವರ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಸ್ವಗ್ರಾಪಂ ಹನುಮಂತನಹಳ್ಳಿಯಲ್ಲಿ ಮಳೆ ಬಂದರೆ ಓಡಾಡಲು ಸಮಸ್ಯೆ ಆಗುತ್ತಿದೆ. ನರೇಗಾ ಯೋಜನೆಯಡಿ ಹಳ್ಳ ದುರಸ್ತಿಗೊಳಿಸುವಂತೆ ಪಿಡಿಒ ಮುದ್ದರಾಜ್‌ಗೆ ಆದೇಶಿಸಿದ ಬಳಿಕ ಬ್ಯಾಡನೂರು,ಬಿ.ಕೆ.ಹಳ್ಳಿ ಗ್ರಾಪಂ ಪ್ರಗತಿ ಕುರಿತು ಪಿಡಿಒ ಮುತ್ಯಾಲಪ್ಪರಿಂದ ಮಾಹಿತಿ ಸಂಗ್ರಹಿಸಿದರು.

ವಿವಿಧ ಯೋಜನೆ ಪ್ರಗತಿ ಬಗ್ಗೆ ಪ್ರಶ್ನಿಸಿದ ಶಾಸಕರು ಕುಡಿವ ನೀರು ನರೇಗಾ ಪ್ರಗತಿಯಲ್ಲಿ ಆಸಕ್ತಿವಹಿಸುವಂತೆ ಕಾರ್ಯದರ್ಶಿ ಹನುಮಂತಪ್ಪನಿಗೆ ಎಚ್ಚರಿಸಿದರು. ಯೋಜನೆಗಳ ಹೆಸರಿನಲ್ಲಿ ನೀವು ಹಣ ಲೂಟಿ ಜತೆಗೆ ರಾಜಕೀಯ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಪಿತೂರಿ ನಡೆಸಿದರೆ ಸಮಸ್ಯೆ ಎದುರಾಗುತ್ತದೆ. ನನಗೆ ಕೆಟ್ಟ ಹೆಸರು ಬರುತ್ತದೆ. ಅಭಿವೃದ್ಧಿ ಬಗ್ಗೆ ಆಸಕ್ತಿ ವಹಿಸುವಂತೆ ಗ್ರಾಪಂ ಪಿಡಿಒ ನರೇಗಾ ಯೋಜನೆ ಎಂಜಿನಿಯರ್‌ಗಳಿಗೆ ಆದೇಶಿಸಿದರು.

ಸಭೆ ಬಳಿಕ ಗ್ರಾಪಂ ಅಭಿವೃದ್ಧಿಯ ಅಧಿಕಾರ ಕಂಪ್ಯೂಟರ್‌ ಅಪರೇಟರ್‌ ಕೈಗೆ ನೀಡಬೇಡಿ. ಅವರನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಳ್ಳುವಂತೆ ಆದೇಶಿಸಿದ ಶಾಸಕರು, ಬರಗಾಲ ಎದುರಾದ ಪರಿಣಾಮ ಗ್ರಾಮೀಣ ಪ್ರಗತಿಗೆ ವಿಶೇಷ ಒತ್ತು ನೀಡಬೇಕು. ಕುಡಿವ ನೀರಿನ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು.ರೈತ ಮತ್ತು ಜನ ಸಾಮಾನ್ಯ ಸ್ಪಂದಿಸಬೇಕು,ವಿವಿಧ ಯೋಜನೆಯ ಕಾಮಗಾರಿ ತ್ವರಿತ ಪ್ರಗತಿ ಕಾಣಬೇಕು.ಸಮಸ್ಯೆ ಇರುವ ಕಡೆ ಮಾಹಿತಿ ಪಡೆದು ಈಗಾಗಲೇ ತಾಲೂಕಿನ ಅಭಿವೃದ್ಧಿ 50ಕೋಟಿ ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ.ನಿಕ್ರೀಯ ಪಿಡಿಒ ಬದಲಾವಣೆ ಹಾಗೂ ಹೊಸ ಪಿಡಿಒ ಆಗಮನಕ್ಕೆ ಸಿಇಒ ಜತೆ ಚರ್ಚಿಸಿದ್ದು ಹಂತಹಂತವಾಗಿ ಗ್ರಾಪಂ ಪ್ರಗತಿ ಕುರಿತು ತನಿಖೆಗೆ ಸೂಚಿಸಲಾಗಿದೆ ಎಂದರು)

ಈ ವೇಳೆ ತಾಲ್ಲೂಕು ನಿರ್ವಹಣಾ ಅಧಿಕಾರಿ ಜಾನಕೀ ರಾಮ್ ರವರು, ರಂಗನಾಥ್ ರವರು,ಯೋಜನಾಧಿಕಾರಿ ಮಲ್ಲಿಕಾರ್ಜುನ್ ರವರು ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.ಫೋಟೋ 18ಪಿವಿಡಿ1ಪಾವಗಡ,ತಾಪಂ ಸಭಾಂಗಣದಲ್ಲಿ ನಡೆದ ಗ್ರಾಪಂ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಿಡಿಒ ಮತ್ತು ಕಂಪ್ಯೂಟರ್‌ ಅಪರೇಟರ್‌ಗಳ ವಿರುದ್ಧ ಶಾಸಕ ಎಚ್‌.ವಿ.ವೆಂಕಟೇಶ್‌ ಕಂಡಾಮಂಡಲರಾದರು.ಫೋಟೋ 18ಪಿವಿಡಿ2ಪಾವಗಡ,ಗ್ರಾಪಂ ಮಟ್ಟದ ಪ್ರಗತಿ ಪರಿಶೀಲನೆ ಸಭೆ ಬಳಿಕ ಸನ್ಮಾನ ಸ್ವೀಕರಿಸಿ ಗ್ರಾಮೀಣ ಪ್ರಗತಿ ಕುರಿತು ಮಾತನಾಡಿದ ಶಾಸಕ ಎಚ್‌.ವಿ.ವೆಂಕಟೇಶ್‌