ಶಾಂತಿಯುತ, ನಿಷ್ಪಕ್ಷಪಾತ ಮತದಾನ ನಡೆಸಿ: ದೀಪಂಕರ್ ಮೋಹಪಾತ್ರ

| Published : May 04 2024, 12:34 AM IST

ಶಾಂತಿಯುತ, ನಿಷ್ಪಕ್ಷಪಾತ ಮತದಾನ ನಡೆಸಿ: ದೀಪಂಕರ್ ಮೋಹಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆ ನಿಯೋಜಿತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಬೀದರ್‌ ಲೋಕಸಭಾ ಕ್ಷೇತ್ರದ ಸಾಮಾನ್ಯ ವಿಕ್ಷಕರಾದ ದೀಪಂಕರ್ ಮೋಹಪಾತ್ರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಮೇ 7ರಂದು ಬೀದರ್‌ ಲೋಕಸಭಾ ವ್ಯಾಪ್ತಿಯಲ್ಲಿ ನಡೆಯಲಿರುವ ಚುನಾವಣೆಗಳನ್ನು ಕ್ಷೇತ್ರದಲ್ಲಿ ಶಾಂತಿ, ಸುವ್ಯವಸ್ಥಿತ ಹಾಗೂ ನಿಷ್ಪಕ್ಷಪಾತ ಮತದಾನ ನಡೆಸಿ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಸಾಮಾನ್ಯ ವಿಕ್ಷಕ ದೀಪಂಕರ್ ಮೋಹಪಾತ್ರ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆ ನಿಯೋಜಿತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ನಡೆಸಬೇಕು ಹಾಗೂ ಮತಗಟ್ಟೆಗಳಲ್ಲಿ ಮತದಾನಕ್ಕೆ ಬೇಕಾಗುವ ಎಲ್ಲಾ ಮೂಲಭೂತ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಎಆರ್‌ಓಗಳು ಮತದಾರರ ಮಾಹಿತಿ ಪತ್ರ ವಿತರಿಸದಿದ್ದರೆ ವಿತರಿಸಬೇಕು. ಎಫ್ಎಸ್‌ಸಿ ಮತ್ತು ಎಸ್ಎಸ್‌ಟಿ ತಂಡಗಳ ಪಾತ್ರವು ಬಹಳ ಪ್ರಮುಖವಾಗಿದ್ದು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಮತದಾನಕ್ಕೆ ಕೆಲವೇ ದಿನ ಬಾಕಿ ಇರುವುದರಿಂದ ಸಮುದಾಯ ಭವನ, ಕಲ್ಯಾಣ ಮಂಟಪ ಹಾಗೂ ಇತರೆ ದೊಡ್ಡ ಹಾಲ್‌ಗಳಿರುವ ಕಡೆಗಳಲ್ಲಿ ಗಮನಿಸುತ್ತಿರಬೇಕು ಮತ್ತು ಯಾವುದೇ ಸ್ಥಳಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು. ಮತದಾನಕ್ಕೆ ಬಾಕಿ ಇರುವ 72 ಗಂಟೆ ಹಾಗೂ 48 ಗಂಟೆಗಳಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕೆಂದು ಹೇಳಿದರು.

ಚುನಾವಣಾ ವೆಚ್ಚ ವೀಕ್ಷಕರಾದ ಎಸ್. ಈಶ್ವರ್ ಮಾತನಾಡಿ, ವಿಎಸ್‌ಟಿ ಮತ್ತು ಎಸ್ಎಸ್‌ಟಿ ತಂಡಗಳು ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು ಮತ್ತು ಚುನಾವಣಾ ಎಲ್ಲಾ ಖರ್ಚು ವೆಚ್ಚಗಳ ಮಾಹಿತಿ ಪ್ರತಿದಿನದ ವರದಿಯನ್ನು ಸರಿಯಾದ ಸಮಯದಲ್ಲಿ ನೀಡಬೇಕೆಂದು ಹೇಳಿದರು.

ಪೊಲೀಸ್ ವೀಕ್ಷಕರಾದ ಜೆ.ಎಸ್. ರಜಪೂತ ಮಾತನಾಡಿ, ಎಲ್ಲಾ ಮತಗಟ್ಟೆಗಳಲ್ಲಿ ವ್ಯವಸ್ಥಿತವಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಬೇಕು. ಅರೆಸೇನಾ ಪಡೆಗಳಾದ ಸಿಆರ್‌ಪಿಎಫ್ ತುಕಡಿಗಳನ್ನು ಒಂದೇ ಕಡೆ ಎರಡು ಮೂರು ಮತಗಟ್ಟೆ ಇರುವಲ್ಲಿ ಹಾಗೂ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಹಾಗೂ ಅರೆಸೇನಾ ಸಿಬ್ಬಂದಿ ನಿಯೋಜನೆ ಮಾಡಬೇಕೆಂದು ಹೇಳಿದರು.

ಈ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಓ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್ಎಲ್, ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಚುನಾವಣಾ ತಹಸೀಲ್ದಾರ್‌ ಅಣ್ಣಾರಾವ್ ಪಾಟೀಲ, ಎಆರ್‌ಓಗಳು, ತಹಸೀಲ್ದಾರರು ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ ಇತರೆ ಅಧಿಕಾರಿಗಳು ಇದ್ದರು.