ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬೆಂಗಳೂರಲ್ಲಿ ಮಾತ್ರ ಪಿಎಸ್‌ಐ ಹುದ್ದೆಗಳ ಪರೀಕ್ಷೆ ನಡೆಸಲು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆಕ್ಷೇಪಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಪರೀಕ್ಷೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಪಿಎಸ್‌ಐ ಹುದ್ದೆಗಳ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ ಪಿಎಸ್‌ಐ ನೇಮಕಾತಿ ಸಂದರ್ಭದಲ್ಲಿ ನಡೆದಿರುವ ಅವ್ಯವಹಾರ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಂಚನೆಗಳ ಹಿನ್ನೆಲೆಯಲ್ಲಿ 54 ಸಾವಿರ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಬೆಂಗಳೂರಲ್ಲಿ ಮಾತ್ರ ನಡೆಸಲು ನಿರ್ಧರಿಸಿದೆ. ಇದು ಅವೈಜ್ಞಾನಿಕ ಕ್ರಮ ಎಂದು ಟೀಕಿಸಿದ್ದಾರೆ.
ಬೇರೆ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿರುತ್ತಾರೆ. ಅವರು ಬೆಂಗಳೂರಿಗೆ ಪ್ರಯಾಣಿಸಬೇಕೆಂದರೆ 2-3 ದಿನಗಳ ಕಾಲ ಬೆಂಗಳೂರಲ್ಲಿ ಉಳಿಯಬೇಕಾಗುತ್ತದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆ, ಕೊಡಗು, ಚಾಮರಾನಗರ, ದಾವಣಗೆರೆ, ಶಿವಮೊಗ್ಗದಂತಹ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿ ಅಲ್ಲಿ ವಸತಿ ಮತ್ತು ಸಾರಿಗೆ ವೆಚ್ಚ ಭರಿಸಲು ಅಭ್ಯರ್ಥಿಗಳಿಗೆ ಕಷ್ಟವಾಗುತ್ತದೆ.ಸರಿಯಾದ ಸಮಯಕ್ಕೆ ಬೆಂಗಳೂರಿಗೆ ಬರಲು ಸಾಧ್ಯವಾಗುತ್ತದೆಯೇ? ಸಾರಿಗೆ ಸೌಲಭ್ಯ ಹೊಂದಿದ್ದಾರಾ? ಅಥವಾ ಬೆಂಗಳೂರಲ್ಲಿ ಬಂದು ಯೋಗ್ಯ ಬೆಲೆಯಲ್ಲಿ ವಾಸಿಸಲು ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗಳು ಉದ್ಭವವಾಗುತ್ತದೆ.
ಇವುಗಳನ್ನೆಲ್ಲ ಬಿಟ್ಟರೂ ಬೆಂಗಳೂರಲ್ಲಿ ಮಾತ್ರ ಅವ್ಯವಹಾರ ಹಾಗೂ ವಂಚನೆ ಇಲ್ಲದೇ ಪರೀಕ್ಷೆ ನಡೆಸಲು ಸಾಧ್ಯವೇ? ಈ ಹಿಂದೆ ನಡೆದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರಗಳು ಬಹುತೇಕ ಬೆಂಗಳೂರಲ್ಲಿ ನಡೆದಿವೆ. ನೇಮಕಾತಿ ಹೊರತುಪಡಿಸಿ ಉಳಿದ ಅವ್ಯವಹಾರ, ವಂಚನೆಗಳೆಲ್ಲ ಬೆಂಗಳೂರಲ್ಲಿ ಗರಿಷ್ಠ ಪ್ರಮಾಣದಲ್ಲಿ ನಡೆದಿವೆ. ಯಾವುದೇ ವಂಚನೆ ಹಾಗೂ ಕೃತ್ಯಗಳಿಗೆ ಕೇವಲ ಸ್ಥಳವು ಲಿಖಿತ ಪರೀಕ್ಷೆಯನ್ನು ಖಚಿತಪಡಿಸುವುದಿಲ್ಲ ಎಂದು ತಿಳಿಸಿದ್ದಾರೆ.ಸರ್ಕಾರ ಎಲ್ಲ ಇಲಾಖೆಗಳಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಬಳಸಿಕೊಂಡು ವಂಚನೆ ರಹಿತ ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆಸಬಹುದಾಗಿದೆ. ಬೆಂಗಳೂರಲ್ಲಿ ಮಾತ್ರ ಲಿಖಿತ ಪರೀಕ್ಷೆ ನಡೆಸುವುದರಿಂದ ಹಾಜರಾತಿ ಮತ್ತು ಫಲಿತಾಂಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದಕಾರಣ ಮೂರು ದಶಕಗಳ ಹಿಂದೆಯೇ ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಅನನುಕೂಲತೆ ಮತ್ತು ಆರ್ಥಿಕ ಹೊರೆ ತಡೆಯಲು ಎಲ್ಲ ವಿಭಾಗೀಯ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುತ್ತಿತ್ತು.
ಆದಕಾರಣ ಇದನ್ನೆಲ್ಲ ಪರಿಗಣಿಸಿ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಂಗಳೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.