ಸಂಶೋಧನೆಯು ಸಮಾಜದ ಆತ್ಮವಿದ್ದಂತೆ. ಇವು ಕೇವಲ ಪುಸ್ತಕದ ಪುಟಗಳಿಗೆ ಸೀಮಿತವಾಗದೇ, ಸಮಾಜಕ್ಕೆ ಅಗತ್ಯತೆ ಗುರುತಿಸಿ ಪರಿಹಾರದ ಪ್ರತ್ಯಕ್ಷ ಕೊಡುಗೆ ನೀಡಬೇಕು ಎಂದು ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ರಮೇಶ್ ಹೇಳಿದ್ದಾರೆ.
- ‘ಸಂಶೋಧನಾ ಸೇತು’ ಸಾಮರ್ಥ್ಯವರ್ಧನಾ ಕಾರ್ಯಾಗಾರದಲ್ಲಿ ಪ್ರೊ.ರಮೇಶ ಸಲಹೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಸಂಶೋಧನೆಯು ಸಮಾಜದ ಆತ್ಮವಿದ್ದಂತೆ. ಇವು ಕೇವಲ ಪುಸ್ತಕದ ಪುಟಗಳಿಗೆ ಸೀಮಿತವಾಗದೇ, ಸಮಾಜಕ್ಕೆ ಅಗತ್ಯತೆ ಗುರುತಿಸಿ ಪರಿಹಾರದ ಪ್ರತ್ಯಕ್ಷ ಕೊಡುಗೆ ನೀಡಬೇಕು ಎಂದು ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ರಮೇಶ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಸಮಾಜ ಕಾರ್ಯ ಅಧ್ಯಯನ ವಿಭಾಗವು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ ಸಹಯೋಗದಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ ‘ಸಂಶೋಧನಾ ಸೇತು’ ಐದು ದಿನಗಳ ಸಾಮರ್ಥ್ಯವರ್ಧನಾ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.ಸಮಾಜದ ಅಗತ್ಯಗಳನ್ನು ಅರಿತು ಸಮಸ್ಯೆಯ ಮೂಲದ ಅಂತರವನ್ನು ಗುರುತಿಸಿ, ಅಧ್ಯಯನ ಮಾಡಬೇಕು. ಸರಿಯಾದ ವಿಧಾನವಿಲ್ಲದ ಸಂಶೋಧನೆಯು ದಾರಿಯಿಲ್ಲದ ಪಯಣದಂತೆ ವ್ಯರ್ಥವಾಗುತ್ತದೆ. ಸಂಶೋಧನೆ ಎಂದರೆ ಕೇವಲ ಪದವಿ ಪಡೆಯುವ ಪ್ರಕ್ರಿಯೆಯಲ್ಲ; ಅದು ಜ್ಞಾನ ಮತ್ತು ಸಮಾಜದ ನಡುವೆ ಸೇತುವೆ ನಿರ್ಮಿಸುವ ಮಹತ್ತರ ಬೌದ್ಧಿಕ ಜವಾಬ್ದಾರಿಯಾಗಿದೆ. ಪ್ರಸ್ತುತ ಕಾರ್ಯಕ್ರಮವು ಸಮಕಾಲೀನ ವಿಷಯದೊಂದಿಗೆ ಅಧ್ಯಯನ ಸೂಕ್ತವಾಗಿದೆ ಎಂದು ತಿಳಿಸಿದರು.
ಉತ್ತಮ ಸಂಶೋಧನೆಯ ಅಡಿಪಾಯವೇ ಸರಿಯಾದ ಸಂಶೋಧನಾ ವಿಧಾನಶಾಸ್ತ್ರ. ಸಂಶೋಧನಾ ಸಮಸ್ಯೆಯನ್ನು ಗುರುತಿಸುವುದರಿಂದ ಆರಂಭಿಸಿ, ವ್ಯಾಖ್ಯಾನ ಮತ್ತು ತೀರ್ಮಾನಗಳವರೆಗೆ ಪ್ರತಿಯೊಂದು ಹಂತವೂ ವೈಜ್ಞಾನಿಕ ಶಿಸ್ತನ್ನು ನಿರೀಕ್ಷಿಸುತ್ತದೆ. ಸಂಶೋಧಕನು ಮೊದಲು ನಾನು ಏನನ್ನು ಅಧ್ಯಯನ ಮಾಡುತ್ತಿದ್ದೇನೆ? ಎಂಬ ಪ್ರಶ್ನೆಗಿಂತಲೂ ಈ ಸಮಸ್ಯೆಯನ್ನು ಏಕೆ ಅಧ್ಯಯನ ಮಾಡಬೇಕು ಮತ್ತು ನನ್ನ ಸಂಶೋಧನೆಯಿಂದ ಸಮಾಜಕ್ಕೆ ಯಾವ ಹೊಸ ಜ್ಞಾನ ಲಭ್ಯವಾಗುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ಸಂಶೋಧನೆಯಲ್ಲಿ ಪ್ರಕಟಣಾ ನೈತಿಕತೆ ಅತ್ಯಂತ ಮಹತ್ವ ಪಡೆಯುತ್ತದೆ. ಒತ್ತಡದ ವಾತಾವರಣದಲ್ಲಿ ಕೆಲವೊಮ್ಮೆ ಸಂಶೋಧನೆಯ ಗುಣಮಟ್ಟಕ್ಕಿಂತ ಪ್ರಕಟಣೆಗಳ ಸಂಖ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ಪ್ರವೃತ್ತಿ ಬದಲಾಗಬೇಕು. ಉತ್ತಮ ಸಂಶೋಧನೆ ಎಂದರೆ ಹೆಚ್ಚು ಲೇಖನಗಳನ್ನು ಪ್ರಕಟಿಸುವುದಲ್ಲ; ಅದು ಹೊಸ, ಸತ್ಯನಿಷ್ಠ, ಪರಿಶೀಲಿಸಬಹುದಾದ ಮತ್ತು ಸಮಾಜೋಪಯೋಗಿ ಜ್ಞಾನವನ್ನು ಸೃಷ್ಟಿಸುವುದಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಕಟಣೆ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣದ ಪ್ರಕಟಣಾ ಪುಸ್ತಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ತುಮಕೂರು ವಿವಿ ಕಲಾ ನಿಕಾಯದ ಡೀನ್ ಪ್ರೊ. ಕೆ.ಜಿ.ಪರಶುರಾಮ ದಿಕ್ಸೂಚಿ ಭಾಷಣ ಮಾಡಿದರು. ಐಎಸ್‌ಪಿಡಬ್ಲ್ಯೂ ಪ್ರೊ.ಐ.ಎ.ಶರೀಫ್ ಸಮಾಜ ಕಾರ್ಯ ಸಂಘಟನೆ, ಸಂಶೋಧನೆಯ ಅಗತ್ಯಗಳ ಕುರಿತು ಮಾತನಾಡಿದರು.ಹಣಕಾಸು ಅಧಿಕಾರಿ ಪ್ರೊ.ಆರ್.ಶಶಿಧರ, ಕಲಾ ನಿಕಾಯದ ಡೀನ್ ಪ್ರೊ. ಎಂ.ಯು. ಲೋಕೇಶ್, ಕೆಎಸ್‌ಸಿಎಸ್‌ಟಿ ಯೋಜನಾ ಎಂಜಿನಿಯರ್ ಆರ್.ಗಂಗಾಧರಪ್ಪ ಮಾತನಾಡಿದರು. ಕುಲಸಚಿವ ಎಸ್.ಬಿ.ಗಂಟಿ, ಡಾ. ಪಟವರ್ಧನ ಉಪಸ್ಥಿತರಿದ್ದರು. ಪ್ರೊ.ಬಿ.ಎಸ್. ಪ್ರದೀಪ್ ಸ್ವಾಗತಿಸಿ, ಡಾ.ಕೆ.ತಿಪ್ಪೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ.ಪಿ.ಶಿವಲಿಂಗಪ್ಪ ವಂದಿಸಿದರು.
- - -(ಬಾಕ್ಸ್)
* ಸಂಶೋಧನೆ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಿ: ಕುಲಪತಿದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶೋಧನೆಯ ಶ್ರೇಷ್ಠತೆ ಅದರ ಪ್ರಮಾಣದಲ್ಲಲ್ಲ. ಅದರ ಪ್ರಾಮಾಣಿಕತೆ, ಗುಣಮಟ್ಟ ಮತ್ತು ಸಾಮಾಜಿಕ ಪ್ರಸ್ತುತತೆಯಲ್ಲಿ ಇದೆ. ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು ಇಂದು ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ. ವಿಶ್ವವಿದ್ಯಾನಿಲಯದ ನಿಜವಾದ ಶಕ್ತಿ ಅದರ ಕಟ್ಟಡಗಳಲ್ಲಿ ಅಥವಾ ಸಂಖ್ಯೆಯಲ್ಲಿ ಇರುವುದಿಲ್ಲ. ಅದು ಸೃಷ್ಟಿಸುವ ಜ್ಞಾನ, ಹೊಸತನ, ಸಂಶೋಧನಾ ಸಂಸ್ಕೃತಿ ಮತ್ತು ಸಮಾಜಮುಖಿ ಪರಿಹಾರಗಳಲ್ಲಿ ಅಡಗಿದೆ ಎಂದರು.
ಇಂದಿನ ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಸಂಶೋಧನೆಗೆ ಹೊಸ ಅವಕಾಶಗಳ ಜೊತೆಗೆ ಹೊಸ ಸವಾಲುಗಳೂ ಎದುರಾಗಿವೆ. ತಂತ್ರಜ್ಞಾನವು ಸಂಶೋಧಕನ ಚಿಂತನೆ, ವಿಮರ್ಶಾತ್ಮಕತೆ ಮತ್ತು ನೈತಿಕ ಜವಾಬ್ದಾರಿಯನ್ನು ಬದಲಿಸಲು ಸಾಧ್ಯವಿಲ್ಲ. ಉಪಕರಣಗಳು ವೇಗವನ್ನು ನೀಡಬಹುದು; ಆದರೆ ಸಂಶೋಧನೆಗೆ ವಿಶ್ವಾಸಾರ್ಹತೆ ನೀಡುವುದು ಸಂಶೋಧಕನ ಪ್ರಾಮಾಣಿಕತೆಯೇ ಆಗಿದೆ ಎಂದು ನುಡಿದರು.- - -
-27ಕೆಡಿವಿಜಿ31:ದಾವಣಗೆರೆ ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗವು ಏರ್ಪಡಿಸಿರುವ ''''ಸಂಶೋಧನಾ ಸೇತು'''' ಐದು ದಿನಗಳ ಸಾಮರ್ಥ್ಯವರ್ಧನಾ ಕಾರ್ಯಾಗಾರವನ್ನು ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿವಿ ಕುಲಪತಿ ಪ್ರೊ. ಬಿ.ರಮೇಶ್ ಉದ್ಘಾಟಿಸಿದರು.