ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿಶ್ವಾದ್ಯಂತ ಹಾವು ಕಡಿಸಿಕೊಂಡು ಸಾಕಷ್ಟು ಜನರು ಮೃತಪಟ್ಟಿದ್ದಾರೆ ಹಾಗೂ ಅಂಗವಿಕಲರಾಗಿದ್ದಾರೆ, ಹಾಗಾಗಿ ಭಾರತದಲ್ಲಿ ಹಾವುಗಳ ಬಗ್ಗೆ ವೈಜ್ಞಾನಿಕ ತಿಳುವಳಿಕೆ ನೀಡಿ, ಜನರನ್ನು ಎಚ್ಚರಿಸಿ, ಹಾವುಗಳ ರಕ್ಷಣೆಯ ಜೊತೆಗೆ ಮನುಷ್ಯರನ್ನು ಸಹ ರಕ್ಷಿಸಿಕೊಳ್ಳುವಂತಹ ಮಾರ್ಗ ಕಂಡುಕೊಳ್ಳಬೇಕಾಗಿದೆ ಎಂದು ಉರಗ ಪ್ರೇಮಿ, ಸ್ನೇಕ್ ಶಿವು ಮಾತನಾಡಿದರು.ನಗರದ ಸ್ಟೇಡಿಯಂ ಬಳಿ ಇರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ 71ನೇ ವನ್ಯಜೀವಿ ಸಪ್ತಾಹದ ಕಾರ್ಯಕ್ರಮದಲ್ಲಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಮಾತನಾಡಿದರು.
ಭಾರತದಲ್ಲಿ ಸುಮಾರು 275 ಜಾತಿಯ ಹಾವುಗಳು ಕಂಡುಬರುತ್ತವೆ. ಅದರಲ್ಲಿ ಕೆಲವು ವಿಷಕಾರಿ ಹಾವುಗಳು ಉಂಟು, ನಾಗರಹಾವು, ಕಟ್ಟು ಹಾವು, ರಸೆಲ್ಸ್ ವೈಪರ್ ಕೊಳಕ ಮಂಡಲ, ಸಾ-ಸ್ಕೇಲ್ಡ್ ವೈಪರ್, ಹಪ್ಪಾಟೆ ಹಾವು, ಕಾಳಿಂಗ ಸರ್ಪ, ಇವುಗಳ ಬಗ್ಗೆ ಎಚ್ಚರಿಕೆ ವಹಿಸಿ, ಹಾವು ಕಡಿದ ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ, ಅಲ್ಲಿ ವಿಷದ ಪ್ರಮಾಣವನ್ನು ಪರೀಕ್ಷಿಸಿ, ಸೂಕ್ತ ಚಿಕಿತ್ಸೆ ನೀಡಿ ವ್ಯಕ್ತಿಯನ್ನ ಬದುಕಿಸಬಹುದು.ಉಳಿದ ಹಾವುಗಳಾದ ಧಾಮಿನ್, ರೆಡ್ ಸ್ಯಾಂಡ್ ಬೋವಾ, ರ್ಯಾಟ್ ಸ್ನೇಕ್, ಚೆಕರ್ಡ್ ಕೀಲ್‌ಬ್ಯಾಕ್ ಇತ್ಯಾದಿಗಳು ಬಹಳ ಪ್ರಯೋಜನಕಾರಿ ಮತ್ತು ವಿಷಕಾರಿಯಲ್ಲ. ಅವು ಹೊಲಗಳಲ್ಲಿ ಇಲಿ ಮತ್ತು ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ಸಹಾಯ ಮಾಡುತ್ತವೆ. ಹಾಗಾಗಿ ಹಾವುಗಳ ಬಗ್ಗೆ ತಿಳಿದುಕೊಂಡರೆ ಯಾರೂ ಅವುಗಳನ್ನ ಕೊಲ್ಲಲಾರರು ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಮಾತನಾಡಿ, ಕಾಡು ಪ್ರಾಣಿಗಳಿಗೂ ಮತ್ತು ಜನರ ಮಧ್ಯೆ ಸಂಘರ್ಷಗಳು ಹೆಚ್ಚಾಗುತ್ತಿದ್ದು ಅವುಗಳ ನಿರ್ವಹಣೆಯಲ್ಲಿ ನಾವು ಸೋಲುತ್ತಿದ್ದೇವೆ. ಶಿಕ್ಷಣದಲ್ಲಿ ನಾವು ಮಾತೃಭಾಷೆ ಬಳಕೆ ಮಾಡಿ ಜನರಲ್ಲಿ ಪರಿಸರ ಪ್ರಜ್ಞೆ, ವನ್ಯಜೀವಿಗಳ ಬಗ್ಗೆ ಅಭಿಮಾನವನ್ನು ಮೂಡಿಸಬೇಕಾಗಿದೆ ಎಂದರು.ಗಾಂಧೀಜಿಯವರು ಸಹ ಹಾವುಗಳನ್ನು ಹಿಡಿದು, ಡಬ್ಬಿಯಲ್ಲಿ ಹಾಕಿ, ಕಾಡಿಗೆ ಹಿಂತಿರುಗಿಸುವಂತಹ ಚಟುವಟಿಕೆ ಮಾಡುತ್ತಿದ್ದರು, ಆದರೆ ಗಾಂಧೀಜಿಯವರು ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಜೀವಂತವಿರಲಿ ಎಂದು ಅವರನ್ನು ಹಾವು ಹಿಡಿಯುವುದರಿಂದ ಮುಕ್ತಗೊಳಿಸಲಾಗಿತ್ತು. ಇಂತಹ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ, ನಾವು ಗಾಂಧೀಜಿಯವರ ಪರಿಸರ ಪ್ರೇಮ, ವನ್ಯಜೀವಿಗಳ ಬಗ್ಗೆ ಇದ್ದ ಮಮತೆಯನ್ನು ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಕರಿಯಪ್ಪ ಮಾಳಗಿ ಮಾತನಾಡಿ, ವಿದ್ಯಾರ್ಥಿಗಳು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಿಕೊಂಡು, ಗ್ರಾಮಗಳಲ್ಲಿ ವಾಸಿಸುವಂತಹ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಾಗಿ ಹಾವು ಕಡಿತದಿಂದ ರಕ್ಷಣೆ ಮಾಡಿಕೊಳ್ಳಬೇಕು ಹಾಗೂ ಅವುಗಳನ್ನು ರಕ್ಷಿಸಿ, ಕಾಡುಗಳಿಗೆ ಬಿಡುವಂತಹ ವ್ಯವಸ್ಥೆ ಮಾಡಿಕೊಳ್ಳಬೇಕು. ಹಾವು ಕಡಿತ ಉಂಟಾದಂತವರನ್ನು ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ತರಬೇಕು ಎಂದರು.ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ವೆಂಕಟೇಶ ಭೀಮಣ್ಣ ಪಡೆದಳ್ಳಿ, ಗಸ್ತು ಅರಣ್ಯ ಪಾಲಕರಾದ ಸಂತೋಷ್ ಮಲ್ಲಾಪುರ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮುಖಾಂತರ ಚರಕವನ್ನು ಪ್ರದರ್ಶಿಸಿ, ಹಾವುಗಳ ಮಾದರಿಯನ್ನು, ಆನೆ, ಬೆಕ್ಕು, ಪಕ್ಷಿಗಳನ್ನು ಆಟದ ಸಾಮಾನುಗಳ ಮುಖಾಂತರ ತೋರಿಸಿ, ಪ್ರದರ್ಶಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))