ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಸರಬರಾಜು ತಡೆಯಲು ಅನುಮಾನಾಸ್ಪದವಾಗಿ ಕಂಡುಬರುವ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಅನಿರೀಕ್ಷಿತ ತಪಾಸಣೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್‌ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾದಕ ವಸ್ತುಗಳ ಸೇವನೆ ಕುರಿತಂತೆ ಪೊಲೀಸ್ ಇಲಾಖೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ 18ರಿಂದ 35 ವಯೋಮಿತಿಯ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಕಂಡು ಬರುತ್ತದೆ. ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತಂತೆ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸುವಂತೆ ತಿಳಿಸಿದರು.

ಜಿಲ್ಲೆಯ ಎಲ್ಲ ಮೆಡಿಕಲ್ ಶಾಪ್‌ಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧಗಳನ್ನು ನೀಡದಂತೆ ಸೂಚನೆ ನೀಡುವಂತೆ ಮತ್ತು ಈ ಕುರಿತು ಮೆಡಿಕಲ್ ಶಾಪ್‌ಗಳಲ್ಲಿ ಭಿತ್ತಿಪತ್ರ ಅಳವಡಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಔಷಧ ನಿಯಂತ್ರಕರಿಗೆ ಸೂಚಿಸಿದ ಜಿಲ್ಲಾಧಿಕಾರಿ, ಸಲಹಾ ಚೀಟಿ ಇಲ್ಲದೇ ಔಷಧ ವಿತರಿಸುವ ಶಾಪ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಾದಕ ವಸ್ತುಗಳ ಸಂಗ್ರಹ, ಬಳಕೆ, ಸರಬರಾಜು ಕುರಿತಂತೆ ಮಾಹಿತಿ ನೀಡಲು ರಚಿಸಿರುವ ಡ್ರಗ್ ಫ್ರೀ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಬಳಕೆ ಮತ್ತು ಅದರ ಉಪಯೋಗದ ಕುರಿತಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ ಅವರು, ಎನ್ ಕಾರ್ಡ್ ಸಮಿತಿಯ ಎಲ್ಲ ಸದಸ್ಯರು ಪ್ರತಿ ತಿಂಗಳು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಂಡ ತಪಾಸಣೆಯ ಕುರಿತು ಪ್ರಗತಿ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ನಿರ್ದೇಶಿಸಿದರು.

ಜಿಲ್ಲೆಯಲ್ಲಿ 2026ರಲ್ಲಿ ಇದುವರೆಗೆ ಮಾದಕ ವಸ್ತು ಸರಬರಾಜಿನ 8 ಪ್ರಕರಣಗಳಲ್ಲಿ 14 ಮಂದಿಯನ್ನು ಬಂಧಿಸಿ, ₹1,49,500 ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದು, ಮಾದಕ ವಸ್ತು ಸೇವನೆಯ 97 ಪ್ರಕರಣಗಳಲ್ಲಿ 112 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದರು.


ಸಭೆಯಲ್ಲಿ ಪೊಲೀಸ್, ಆರೋಗ್ಯ, ಶಿಕ್ಷಣ, ಬಂದರು, ಮೀನುಗಾರಿಕೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.