ಸಾರಾಂಶ
ದಕ್ಷಿಣ ಕನ್ನಡ ಜಿಲ್ಲೆಯ ಬಹುಸಂಸ್ಕ್ರತಿಯ ಪ್ರತಿಬಿಂಬವಾಗಿ ನಡೆಸುವ ಕರಾವಳಿ ಉತ್ಸವವನ್ನು ಪ್ರತಿವರ್ಷವೂ ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಬಹುಸಂಸ್ಕ್ರತಿಯ ಪ್ರತಿಬಿಂಬವಾಗಿ ನಡೆಸುವ ಕರಾವಳಿ ಉತ್ಸವವನ್ನು ಪ್ರತಿವರ್ಷವೂ ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಕಳೆದ ವರ್ಷದ ಉತ್ಸವದಲ್ಲಿ ಉಳಿಕೆಯಾದ ಮೊತ್ತವನ್ನು ಕಾಯ್ದಿರಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.ವರ್ಗಾವಣೆ ಹಿನ್ನೆಲೆಯಲ್ಲಿ ಬೀಳ್ಕೊಡುಗೆಯ ಶುಭಾಶಯ ಸಲ್ಲಿಸಿದ ಕೊಂಕಣಿ, ಬ್ಯಾರಿ, ತುಳು ಅಕಾಡೆಮಿ ಅಧ್ಯಕ್ಷರ ಜತೆಗೆ ಅವರು ಈ ಅಭಿಪ್ರಾಯ ಹಂಚಿಕೊಂಡರು.ಕಳೆದ ಸಾಲಿನ ಕರಾವಳಿ ಉತ್ಸವದಲ್ಲಿ 1.20 ಕೋಟಿ ರು. ಉಳಿತಾಯವಾಗಿದೆ. ಮುಂದಿನ ಕರಾವಳಿ ಉತ್ಸವ ನಡೆಸುವವರಿಗೆ ಯಾವುದೇ ಆರ್ಥಿಕ ಹೊರೆಯಾಗದು. ಆದ್ದರಿಂದ ಉತ್ಸವವನ್ನು ಮತ್ತಷ್ಟು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಬೇಕು. ಅದೇ ರೀತಿ ಕರಾವಳಿ ಉತ್ಸವ ಮೈದಾನದ ಒಂದು ಪಾರ್ಶ್ವದಲ್ಲಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿ ಅದರ ಆದಾಯದ ಅರ್ಧ ಭಾಗವನ್ನು ಕರಾವಳಿ ಉತ್ಸವ ಹಾಗೂ ಇನ್ನರ್ಧ ಭಾಗವನ್ನು ಮಂಗಳಾ ಕ್ರೀಡಾಂಗಣದ ನಿರ್ವಹಣೆಗೆ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಚಿಂತನೆ ನಡೆಸುವಂತೆ ಮುಲ್ಲೈ ಮುಗಿಲನ್ ಸಲಹೆ ನೀಡಿದರು.
ಹಳೆ ಜಿಲ್ಲಾಧಿಕಾರಿ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ರೂಪಿಸಿ ಕಲೆ, ಸಂಸ್ಕ್ರತಿ ಚಟುವಟಿಕೆಯ ಕೇಂದ್ರವಾಗಿ ರೂಪಿಸುವ ಬಗ್ಗೆ ಈಗಾಗಲೇ ಚಿಂತಿಸಲಾಗಿದ್ದು, ಈ ಯೋಜನೆಗೆ ಅಕಾಡೆಮಿಗಳು ಹಾಗೂ ಕಲಾವಿದರು ಪೂರಕವಾಗಿ ಸ್ಪಂದಿಸಬೇಕು ಎಂದು ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿಗಳನ್ನು ತುಳು, ಕೊಂಕಣಿ, ಬ್ಯಾರಿ ಭಾಷೆಯ ಪುಸ್ತಕ ನೀಡಿ ಅಭಿನಂದಿಸಲಾಯಿತು, ಈ ಸಂದರ್ಭ ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹಾಗೂ ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಇದ್ದರು.