ಸಾರಾಂಶ
ಮಾ.1ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಪೂರ್ವಸಿದ್ಧತಾ ಸಭೆಕನ್ನಡಪ್ರಭ ವಾರ್ತೆ ಹಾವೇರಿ
ಜಿಲ್ಲೆಯಲ್ಲಿ ಮಾ.1ರಿಂದ 22ರವರೆಗೆ ಜರುಗುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು. ಜಿಲ್ಲಾಡಳಿತಕ್ಕೆ ಯಾವುದೇ ಮುಜುಗರವಾಗದಂತೆ ಬಹಳ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪರೀಕ್ಷಾ ಕಾರ್ಯಗಳನ್ನು ಲೋಪವಾಗದಂತೆ ನಿರ್ವಹಿಸಲಾಗಿದೆ. ಇದೇ ಮಾದರಿಯಲ್ಲಿ ಮುಂಬರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಪರೀಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಶುದ್ಧವಾದ ಕುಡಿಯುವ ನೀರು, ಪಿಠೋಪಕರಣ, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರ ಅಳವಡಿಕೆ, ಶೌಚಾಲಯ ಸ್ವಚ್ಛತೆ ಸೇರಿದಂತೆ ಯಾವುದೇ ಕೊರತೆಯಾಗದಂತೆ ಮುನ್ನೆಚ್ಚರಿಕೆಯಾಗಿ ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ವಿಶೇಷವಾಗಿ ಪ್ರಶ್ನೆಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಸೀಲ್ ಮಾಡುವಾಗ ಕಡ್ಡಾಯವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಕೊಠಡಿ ಮೇಲ್ವಿಚಾರಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಮೊಬೈಲ್ ಬಳಕೆ, ಇ-ಕ್ಯಾಮರಾ, ಲ್ಯಾಪಟಾಪ್ ಒಳಗೊಂಡಂತೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿನ ಝರಾಕ್ಸ್ ಸೆಂಟರ್ ಹಾಗೂ ಟೈಪಿಂಗ್ ಸೆಂಟರ್ ಮುಚ್ಚಲು ಆದೇಶಿಸಲಾಗುವುದು. ಈ ಕುರಿತಂತೆ ನಿಗಾವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಶ್ನೆಪತ್ರಿಕೆಗಳನ್ನು ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಅತ್ಯಂತ ಸುರಕ್ಷಿತವಾಗಿ ಹಾಗೂ ಗೌಪ್ಯವಾಗಿ ಸಾಗಿಸುವ ನಿಟ್ಟಿನಲ್ಲಿ ತಹಸೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಾಚಾರ್ಯರನ್ನೊಳಗೊಂಡ ತ್ರಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ನಿಯಮಾವಳಿ ಅನುಸಾರ ಈ ಸಮಿತಿ ಸದಸ್ಯರು ಗರಿಷ್ಠ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಚಾತುರ್ಯಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಸಿದರು.ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಆರೋಗ್ಯ ಸಹಾಯಕರನ್ನು ನಿಯೋಜಿಸಬೇಕು. ಪರೀಕ್ಷಾ ಕೇಂದ್ರದ ಹೊರ ಆವರಣದಲ್ಲಿ ಯಾವುದೇ ಅಹಿತಕರ ಚಟುವಟಿಕೆ ನಡೆಯದಂತೆ ನಿಗಾವಹಿಸಲು ಬಿಗಿ ಪೊಲೀಸ್ ಬಂದ್ತೋಬಸ್ತ್ ವ್ಯವಸ್ಥೆ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ ಮಾತನಾಡಿ, ಮಾ. 1 ರಿಂದ 22ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ 139 ಪದವಿ ಪೂರ್ವ ಕಾಲೇಜುಗಳ ಪೈಕಿ 22 ಕಾಲೇಜುಗಳನ್ನು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಸುಗಮ ಪರೀಕ್ಷೆಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 15,011 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 13,666 ಹೊಸಬರು, 573 ಪುನರಾವರ್ತಿತ ಹಾಗೂ 772 ಬಾಹ್ಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ವಿವಿಧ ಎಲ್ಲಾ ತಾಲೂಕುಗಳ ತಹಸೀಲ್ದಾರಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಪರೀಕ್ಷಾ ವೇಳಾಪಟ್ಟಿ:ಮಾ.1 ರಂದು ಕನ್ನಡ, ಮಾ.4 ರಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರ, ಮಾ.5 ರಂದು ರಾಜ್ಯ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ, ಮಾ.6 ರಂದು ಮಾಹಿತಿ ತಂತ್ರಜ್ಞಾನ ರಿಟೈಕ್ ಅಟೋಮೋಬೈಲ್ ಹೆಲ್ತ್ಕೇರ್ ಬ್ಯೂಟಿ ಆ್ಯಂಡ್ ವೆಲ್‌ನೆಸ್, ಮಾ.7 ರಂದು ಇತಿಹಾಸ ಮತ್ತು ಭೌತಶಾಸ್ತ್ರ, ಮಾ.9 ರಂದು ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು ಗೃಹ ವಿಜ್ಞಾನ, ಮಾ. 11ರಂದು ತರ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ, ಮಾ.13 ರಂದು ಇಂಗ್ಲಿಷ್, ಮಾ.15 ರಂದು ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ ಮತ್ತು ಮೂಳ ಗಣಿತ, ಮಾ.16 ರಂದು ಅರ್ಥಶಾಸ್ತ್ರ, ಮಾ.18 ರಂದು ಭೋಗಳಶಾಸ್ತ್ರ, ಜೀವಶಾಸ್ತ್ರ, ಮಾ.20 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ ಮತ್ತು ಗಣಕ ವಿಜ್ಞಾನ, ಮಾ.21 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಹಾಗೂ ಮಾ.22 ರಂದು ಹಿಂದಿ ವಿಷಯದ ಪರೀಕ್ಷೆಗಳು ನಡೆಯಲಿವೆ.