ಸಾರಾಂಶ
ಚಾರಣದಲ್ಲಿ ಭಾಗವಹಿಸುವುದರಿಂದ ಮಾನಸಿಕ ಸಾಮಾರ್ಥ್ಯ ವೃದ್ಧಿಸುವ ಜತೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ನೂತನ ಚೇರ್ಮನ್ ಸುದರ್ಶನ್ ಪೈ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚಾರಣದಲ್ಲಿ ಭಾಗವಹಿಸುವುದರಿಂದ ಮಾನಸಿಕ ಸಾಮಾರ್ಥ್ಯ ವೃದ್ಧಿಸುವ ಜತೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯ ಘಟಕದ ನೂತನ ಚೇರ್ಮನ್ ಸುದರ್ಶನ್ ಪೈ ಅಭಿಪ್ರಾಯಪಟ್ಟರು.ಯೂತ್ ಹಾಸ್ಟೆಲ್ ಜಿಲ್ಲಾ ಘಟಕ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಮಲೆನಾಡು ರಾಜ್ಯಮಟ್ಟದ ಚಾರಣ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಒತ್ತಡದ ಜೀವನಶೈಲಿಯಲ್ಲಿ ಎಲ್ಲರೂ ಬದುಕು ನಡೆಸುತ್ತಿದ್ದು, ಇದರಿಂದ ವಿಶ್ರಾಂತಿ ಪಡೆಯಲು ಚಾರಣ, ಪ್ರವಾಸ ಹಾಗೂ ಪ್ರಾಕೃತಿಕ ಸ್ಥಳಗಳ ಭೇಟಿ ವಿಶೇಷ ಅನುಭವ ಒದಗಿಸುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ರಾಷ್ಟ್ರೀಯ ಉಪಾಧ್ಯಕ್ಷ ರವಿಕುಮಾರ್ ಮಾತನಾಡಿ, ಚಾರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 80ಕ್ಕೂ ಹೆಚ್ಚು ಜನರು ಆಗಮಿಸಿರುವುದು ವಿಶೇಷ. ಮುಂಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಹಿಮಾಲಯ ಚಾರಣ ಆಯೋಜಿಸಲಾಗುವುದು ಎಂದು ಹೇಳಿದರು.
ಯೂತ್ ಹಾಸ್ಟೆಲ್ ಮಾಜಿ ರಾಜ್ಯ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಕುಪ್ಪಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಾರಣ ಮಾಡುವುದು ವಿಶೇಷ ಅನುಭವ ನೀಡುತ್ತದೆ. ಶುದ್ಧ ಗಾಳಿ, ಒಳ್ಳೆಯ ಪರಿಸರ ಹಾಗೂ ಪ್ರಕೃತಿ ಸೌಂದರ್ಯ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾತನಾಡಿ, ಕುವೆಂಪು ಅವರು ನಡೆದಾಡಿದ ಪುಣ್ಯಭೂಮಿ ಇದು. ಪ್ರತಿಷ್ಠಾನದ ವತಿಯಿಂದ ಪರಿಸರ ಜಾಗೃತಿ ಹಾಗೂ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, ಈಗಾಗಲೇ ನಮ್ಮ ಘಟಕದಿಂದ 26ಕ್ಕೂ ಹೆಚ್ಚು ರಾಜ್ಯಮಟ್ಟದ ಚಾರಣ ಆಯೋಜಿಸಿ ಯಶಸ್ವಿಯಾಗಿದ್ದೇವೆ ಎಂದರು.ಮಂಗಳೂರು ಯೂನಿಟ್ ಚೇರ್ಮನ್ ಮನಮೋಹನ್, ರಾಜ್ಯ ಘಟಕದ ಮಾಜಿ ಚೇರ್ಮನ್ ಪುರುಷೋತ್ತಮ್, ಚೇರ್ಮನ್ ಹರೀಶ್ ಪಂಡಿತ್, ಕಾರ್ಯದರ್ಶಿ ಪ್ರಶಾಂತ್, ಚಿಕ್ಕನೂರು ಸುಬ್ಬಣ್ಣ, ಮನಮೋಹನ್ ಪವಾರ್, ಬದರಿನಾಥ್, ಮಹೇಶ್, ದೊರೆ ಚಿನ್ನಪ್ಪ, ಪದಾಧಿಕಾರಿಗಳು ಉಪಸ್ಥಿತರಿದ್ದರು.