ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಜೀವನ ನಡೆಸಲು ಒಂದು ಕೆಲಸ ಸಾಕು ಎಂಬ ಮನಸ್ಥಿತಿ ಇರಬಾರದು. ಉತ್ತಮ ಉಪನ್ಯಾಸಕರು ಹಾಗೂ ಸೌಲಭ್ಯಗಳು ಇದ್ದು, ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ಅತ್ಮವಿಶ್ವಾಸ ರೂಢಿಸಿಕೊಂಡು ಮುನ್ನಡೆಯಬೇಕು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ರಚಿಸಬೇಕು. ಗುರಿಯನ್ನು ಸಾಕಾರಗೊಳಿಸುವ ಹಾದಿಯಲ್ಲಿ ಮುನ್ನುಗ್ಗಿ ಜಯಶಾಲಿಗಳಾಗಬೇಕು ಎಂದು ನಿವೃತ್ತ ಪ್ರೊ. ರೋ. ಪಾಲಾಕ್ಷ ಕೆ. ಸಲಹೆ ನೀಡಿದರು.ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಎರಡು ವಿಧದ ನಾಯಕರು ಇದ್ದಾರೆ, ಒಬ್ಬರೂ ಹುಟ್ಟಿನಿಂದಲೇ ನಾಯಕರು, ಮತ್ತೊಬ್ಬರು ಅವರ ಪರಿಶ್ರಮ ಹಾಗೂ ಸಾಧನೆಯಿಂದ ನಾಯಕರಾದವರು. ಹುಟ್ಟಿನಿಂದಲೇ ನಾಯಕರಾದವರ ಸಾಲಿನಲ್ಲಿ ರಾಹುಲ್ ಗಾಂಧಿ ಇದ್ದಾರೆ, ಅವರ ಮನೆಯಲ್ಲಿ ೩ ಜನರು ಪ್ರಧಾನಿಗಳಾಗಿದ್ದಾರೆ. ಪರಿಶ್ರಮ ಹಾಗೂ ಸಾಧನೆಯಿಂದ ನಾಯಕರಾದವರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಪ್ರಧಾನಿ ಮೋದಿಜೀಯವರು ಇದ್ದಾರೆ, ಒಬ್ಬರು ಸಾಮಾನ್ಯ ರೈತರ ಮಗ, ಮತ್ತೊಬ್ಬರು ಟೀ ಮಾರಾಟ ಮಾಡುತ್ತಿದ್ದ ವ್ಯಕ್ತಿ. ಇವರನ್ನು ರೋಲ್ ಮಾಡೆಲ್ ಮಾಡಿಕೊಂಡು, ಮುನ್ನಡೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ಜೀವನದಲ್ಲಿ ನಾವಿಟ್ಟ ಗುರಿ ಮುಟ್ಟಲು ಆತ್ಮವಿಶ್ವಾಸ ಮುಖ್ಯವಾಗಿದ್ದು, ದೃಢ ನಿರ್ಧಾರ ಕೈಗೊಳ್ಳಲು ಉಪನ್ಯಾಸಕರೊಂದಿಗೆ ಉತ್ತಮ ಒಡನಾಟ, ಕಲಿಕೆಯ ತುಡಿತ, ಸತತ ಪರಿಶ್ರಮ ಮತ್ತು ಸಾಧಿಸುವ ಛಲ ನಿಮ್ಮಲ್ಲಿ ಇರಬೇಕು ಎಂದರು.ಹಣದಿಂದ ಔಷಧಿ ಕೊಳ್ಳಬಹುದು, ಆದರೆ ಆರೋಗ್ಯ ಕೊಳ್ಳಲು ಸಾಧ್ಯವಿಲ್ಲ. ಅತ್ಯುತ್ತಮ ಹಾಸಿಗೆ ಕೊಳ್ಳಬಹುದು, ನಿದ್ರೆ ಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ತತ್ವ, ಸಿದ್ಧಾಂತ, ಸಂಸ್ಕೃತಿಯ ಪಾಲನೆ ಮತ್ತು ಮೌಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೇ ಹೊರತು ಬೆಲೆಬಾಳುವ ವಸ್ತುಗಳಿಗಲ್ಲ ಎಂಬುದನ್ನು ಅರಿಯಬೇಕು. ಆತ್ಮವಿಶ್ವಾಸದಿಂದ ಕೂಡಿದ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ವಿದ್ಯಾರ್ಥಿ ದೆಸೆಯಲ್ಲಿ ಹೆಚ್ಚಿನ ಅವಕಾಶವಿದ್ದು, ಸಮಯದ ಬೆಲೆ ಅರಿತು, ಕಾಲೇಜಿನಲ್ಲಿ ದೊರೆಯುವ ಎಲ್ಲಾ ಅವಕಾಶ, ಸೌಲಭ್ಯಗಳನ್ನು ಬಳಸಿಕೊಂಡು ಅತ್ಯುನ್ನತ ಸ್ಥಾನ ಅಲಂಕರಿಸುವ ಗುರಿಯೊಂದಿಗೆ ಮುನ್ನಡೆಯುವಂತೆ ಕರೆಕೊಟ್ಟರು.
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಬಿ.ಆರ್., ಪಿಡಿಒ ಸಂತೋಷ್ ಹಾಗೂ ಇತರರು ಮಾತನಾಡಿದರು.ಐಕ್ಯೂಎಸಿ ಸಂಯೋಜಕರಾದ ಡಾ. ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಮತ್ತು ವಿದ್ಯಾರ್ಥಿಗಳಾದ ಮಹಿಮಾ ಹಾಗೂ ಹರ್ಷಿತಾ ನಿರೂಪಿಸಿದರು.
ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಆಶಾಜ್ಯೋತಿ ಯು.ಎಚ್., ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಎಚ್.ವೈ., ರೋ. ನಿರ್ಮಲ್ ಕುಮಾರ್ ಜೈನ್, ಪ್ರಾಧ್ಯಾಪಕರಾದ ಡಾ. ಗಣೇಶ್, ಡಾ. ಅಶೋಕ್ ಎಚ್.ಕೆ., ಎಂ.ಎಸ್.ಜಯಚಂದ್ರ, ಶ್ವೇತನಾಯ್ಕ, ಪಕೀರಮ್ಮ ಪಿ.ಮುರಗೋಡ್, ರೋಟರಿ ಸಂಸ್ಥೆಯ ಅಶೋಕ್, ರವೀಶ್, ಮಂಜುನಾಥ್ ಇತರರು ಇದ್ದರು.