ವ್ಯಕ್ತಿ ವ್ಯಕ್ತಿಗಳಲ್ಲಿ, ಧರ್ಮಗಳ ನಡುವೆ ನಡೆಯುತ್ತಿರುವ ಸಂಘರ್ಷ ಒಳ್ಳೆಯ ಬೆಳವಣಿಗೆಯಲ್ಲ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆ ಬೆಳೆಸುವುದೇ ಜಾತ್ರಾ ಮಹೋತ್ಸವದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರು ಹೇಳಿದರು.
ಹಾವೇರಿ: ವ್ಯಕ್ತಿ ವ್ಯಕ್ತಿಗಳಲ್ಲಿ, ಧರ್ಮಗಳ ನಡುವೆ ನಡೆಯುತ್ತಿರುವ ಸಂಘರ್ಷ ಒಳ್ಳೆಯ ಬೆಳವಣಿಗೆಯಲ್ಲ. ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಸಮಾಜದಲ್ಲಿ ಸಾಮರಸ್ಯ ಮತ್ತು ಸೌಹಾರ್ದತೆ ಬೆಳೆಸುವುದೇ ಜಾತ್ರಾ ಮಹೋತ್ಸವದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಕೆಸರಳ್ಳಿ ಗ್ರಾಮದ ಕಲ್ಮೇಶ್ವರಸ್ವಾಮಿ 30ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮ ಎಂಬುದು ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಕುರುಡನಿಗೆ ಕಣ್ಣು ಮತ್ತು ಹಕ್ಕಿಗೆ ರೆಕ್ಕೆ ಇದ್ದ ಹಾಗೆ. ಮನುಷ್ಯನಿಗೆ ಹೆತ್ತ ತಾಯಿ, ಹೊತ್ತ ನೆಲ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ ಎಂಬುದನ್ನು ಮರೆಯಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಆದರ್ಶ ಜೀವನದ ಮೌಲ್ಯಗಳನ್ನು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಪ್ರತಿಪಾದಿಸಿದ್ದಾರೆ. ಕೆಸರಳ್ಳಿ ಗ್ರಾಮಸ್ಥರು ಒಕ್ಕಟ್ಟಿನಿಂದ ಪ್ರತಿ ವರುಷ ಜಾತ್ರಾ ಮಹೋತ್ಸವ ಮಾಡುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು. ಇದೇ ವೇಳೆ ಶ್ರೀ ಕಲ್ಮೇಶ್ವರ ಗೋಪುರಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಕಳಸಾರೋಹಣ ನೆರವೇರಿಸಿದರು. ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಸಮಾರಂಭವನ್ನು ಉದ್ಘಾಟಿಸಿದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು, ಕೂಡಲದ ಗುರುಮಹೇಶ್ವರ ಶಿವಾಚಾರ್ಯರು ಮಾತನಾಡಿದರು.ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಕೆಸರಹಳ್ಳಿ ಗ್ರಾಮದ ಗುರುನಾಥಯ್ಯ ಮುಳ್ಳೂರುಮಠ ಅವರು ಅನ್ನದಾಸೋಹ ಸೇವೆಯನ್ನು ಸಲ್ಲಿಸಿದರು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.