ಧಾರವಾಡ ಮಹಾನಗರ ಪಾಲಿಕೆ ಕಾರ್ಯಾರಂಭ ಗೊಂದಲ?

| Published : Jan 13 2025, 12:48 AM IST

ಸಾರಾಂಶ

ಇನ್ನೆರಡು ವರ್ಷಗಳ ಕಾಲ ನೂತನ ಪಾಲಿಕೆ ಕಾರ್ಯಾರಂಭ ಮಾಡದಿರಬಹುದು ಎಂದು ಕಾರ್ಪೊರೇಟರ್‌ಗಳು ಹಾಗೂ ಕಾನೂನು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ: ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕಗೊಳಿಸಿ ಧಾರವಾಡಕ್ಕೆ ಸ್ವತಂತ್ರ ಮಹಾನಗರ ಪಾಲಿಕೆಯ ಸ್ಥಾನಮಾನ ನೀಡಲಾಗಿದೆ. ರಾಜ್ಯ ಸರ್ಕಾರದ ಈ ಘೋಷಣೆ ತಡವೇ, ಧಾರವಾಡದಲ್ಲಿ ಯಾವಾಗ ಮಹಾನಗರ ಪಾಲಿಕೆ ಕಾರ್ಯಾರಂಭ ಎಂಬ ಗೊಂದಲವೂ ಸೃಷ್ಟಿಯಾಗಿದೆ.

ಪ್ರತ್ಯೇಕ ಪಾಲಿಕೆಗೆ ಧಾರವಾಡ ಎಲ್ಲ ಅರ್ಹತೆ ಹೊದಿದ್ದು, ಏಪ್ರಿಲ್‌ ತಿಂಗಳಲ್ಲಿಯೇ ಕಾರ್ಯಾರಂಭ ಮಾಡಬಹುದು ಎಂದು ಕೆಲವರು ಉತ್ಸಾಹದಲ್ಲಿದ್ದರೆ, ಹು-ಧಾ ಮಹಾನಗರ ಪಾಲಿಕೆಯ ಸಂಪೂರ್ಣ ಅವಧಿ ಅಂದರೆ, ಇನ್ನೆರಡು ವರ್ಷಗಳ ಕಾಲ ನೂತನ ಪಾಲಿಕೆ ಕಾರ್ಯಾರಂಭ ಮಾಡದಿರಬಹುದು ಎಂದು ಕಾರ್ಪೊರೇಟರ್‌ಗಳು ಹಾಗೂ ಕಾನೂನು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

ಹು-ಧಾ ಮಹಾನಗರ ಪಾಲಿಕೆಯು 1962ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 2021ರಲ್ಲಿ ಅದರ ಪುನರ್‌ ವಿಂಗಡನೆ ನಂತರ 82 ವಾರ್ಡ್‌ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಂತರ ಎರಡನೇ ಅತಿದೊಡ್ಡ ನಾಗರಿಕ ಸಂಸ್ಥೆಯಾಗಿ ಹೊರಹೊಮ್ಮಿತು. ಹೊಸ ಗೆಜೆಟ್ ಅಧಿಸೂಚನೆಯ ಪ್ರಕಾರ ಆಗಸ್ಟ್ 2021ರಲ್ಲಿ ಹೊಸ ಕಾರ್ಪೊರೇಟರ್‌ಗಳನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ನಡೆಸಲಾಯಿತು ಮತ್ತು ಹೊಸದಾಗಿ ಆಯ್ಕೆಯಾದ ಕಾರ್ಪೊರೇಟರ್‌ಗಳು ಹು-ಧಾ ಮಹಾನಗರ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರೆಕ್ಕೆ ಬರಲು ಕಾಲವಕಾಶ

ಮೂಲಗಳ ಪ್ರಕಾರ, ಅಸ್ತಿತ್ವದಲ್ಲಿರುವ ನಿಗಮವನ್ನು ಇಬ್ಭಾಗ ಮಾಡಿರುವುದು ಇದೇ ಮೊದಲು. ಕೆಎಂಸಿ ಕಾಯಿದೆಯಲ್ಲಿ ಚುನಾಯಿತ ಕಾರ್ಪೊರೇಟರ್‌ಗಳ ಉಳಿದ ಅವಧಿಯನ್ನು ಮುಕ್ತಾಯಗೊಳಿಸಲು ಮತ್ತು ಮಧ್ಯಂತರದಲ್ಲಿ ಹೊಸ ಚುನಾವಣೆಗೆ ಹೋಗಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಧಾರವಾಡ ಮಹಾನಗರ ಪಾಲಿಕೆಗೆ ರೆಕ್ಕೆ ಬರಲು ಕಾಲವಕಾಶ ಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದರ ಹೊರತಾಗಿ ಮೇಯರ್ ಮತ್ತು ಉಪಮೇಯರ್‌ನ ಉಳಿದ ಅವಧಿಗೆ ಸರ್ಕಾರ ಈಗಾಗಲೇ ಗೆಜೆಟ್ ಅಧಿಸೂಚನೆ ಮಾಡಿದೆ. ಆದ್ದರಿಂದ, ಅಸ್ತಿತ್ವದಲ್ಲಿರುವ ಕಾನೂನುಗಳು ಹು-ಧಾ ಮಹಾನಗರ ಪಾಲಿಕೆ ಅವಧಿ ಮುಗಿಯುವ ಮುಂದಿನ ಎರಡು ವರ್ಷಗಳವರೆಗೆ ಇರಲಿವೆ.

ಹೀಗಿದೆ ಪ್ರಕ್ರಿಯೆ!:

ಈ ಮಧ್ಯೆ ಪ್ರತ್ಯೇಕ ಪಾಲಿಕೆ ಸ್ಥಾಪನೆಗೆ ಅಗತ್ಯವಿರುವ ಪ್ರಕ್ರಿಯೆ ರಾಜ್ಯ ಸರ್ಕಾರದಿಂದ ಶೀಘ್ರವೇ ಆರಂಭವಾಗಲಿದ್ದ, ಮುಂದಿನ ಪ್ರಕ್ರಿಯೆ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ವಿವರಿಸುತ್ತಾರೆ. ಮೊದಲ ಹಂತದಲ್ಲಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಲಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲು 30 ದಿನಗಳ ಕಾಲವಕಾಶ ನೀಡಲಾಗುತ್ತದೆ. ಪ್ರಸ್ತುತ ಧಾರವಾಡ 26 ವಾರ್ಡ್‌ಗಳನ್ನು ಹೊಂದಲು ನಿರ್ಧರಿಸಲಾಗಿದ್ದು, ಹೊಸ ಪ್ರದೇಶಗಳು ಅಥವಾ ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಧಾರವಾಡ ನಗರದ ಸುತ್ತಮುತ್ತಲಿನ 18 ಗ್ರಾಮಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಬೇಕು ಎಂಬ ಆಗ್ರಹವಿದ್ದರೂ 2021ರಲ್ಲಿ ವಾರ್ಡ್‌ ವಿಂಗಡಣೆ ನಡೆದಿರುವುದರಿಂದ ಶೀಘ್ರದಲ್ಲಿ ಇದು ಕಷ್ಟಸಾಧ್ಯ ಎಂಬ ಚಿಂತನೆ ಇದೆ. ಇನ್ನು, ಆಕ್ಷೇಪಣೆಗಳು ಸಲ್ಲಿಕೆಯಾದ ನಂತರ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಲಿದೆ. ಇದರ ಆಧಾರದ ಮೇಲೆ ರಾಜ್ಯ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ನಿಗಮದ ಪ್ರಕಾರ ಗೆಜೆಟ್ ಅಧಿಸೂಚನೆಯನ್ನು ಮಾಡಲಿದೆ. 2027ರಲ್ಲಿ ಕಾರ್ಪೊರೇಟರ್‌ಗಳ ಅಸ್ತಿತ್ವದಲ್ಲಿರುವ ಅವಧಿ ಮುಗಿದ ನಂತರವೇ ಹೊಸ ನಿಗಮ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಅವರು.

ಅಧಿಸೂಚನೆ ಹೊರಡಿಸಿದ ಬಳಿಕ ಶೀಘ್ರದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ 30 ದಿನಗಳ ಕಾಲವಕಾಶ ನೀಡಲಾಗುವುದು. ಆಕ್ಷೇಪಣೆಗಳಿದ್ದಲ್ಲಿ ಆಲಿಸಿದ ನಂತರ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಹೇಳುತ್ತಾರೆ. ಒಟ್ಟಾರೆ, ಪ್ರತ್ಯೇಕ ಪಾಲಿಕೆ ಯಾವಾಗ ಎಂಬ ಗೊಂದಲ ಮಾತ್ರ ಇದ್ದು, ರಾಜ್ಯ ಸರ್ಕಾರವೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. 5ನೇ ಸ್ಥಾನಕ್ಕೆ ಕುಸಿದ 2ನೇ ದೊಡ್ಡ ಪಾಲಿಕೆ

ರಾಜ್ಯದಲ್ಲಿ ಪ್ರಸ್ತುತ 10 ಮಹಾನಗರ ಪಾಲಿಕೆಗಳಿವೆ. ಅತಿ ದೊಡ್ಡದು ಬಿಬಿಎಂಪಿ (225 ವಾರ್ಡ್). ಇನ್ನು, 82 ವಾರ್ಡ್‌ಗಳನ್ನು ಹೊಂದಿರುವ ಹು-ಧಾ ಮಹಾನಗರ ಪಾಲಿಕೆ ಎರಡನೇ ದೊಡ್ಡ ನಿಗಮವಾಗಿತ್ತು. ಆದರೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆಯಾದ ನಂತರ 26 ವಾರ್ಡ್‌ಗಳು ಹೊಸ ಪಾಲಿಕೆಗೆ ಬದಲಾಗುತ್ತವೆ ಮತ್ತು ಹುಬ್ಬಳ್ಳಿ ನಗರವು 56 ವಾರ್ಡ್‌ಗಳನ್ನು ಹೊಂದಿರುತ್ತದೆ ಎಂಬುದು ಸದ್ಯದ ಲೆಕ್ಕಾಚಾರ.

65 ವಾರ್ಡ್‌ಗಳನ್ನು ಹೊಂದಿರುವ ಮೈಸೂರು ಎರಡನೇ ಸ್ಥಾನದಲ್ಲಿದ್ದರೆ, ಮಂಗಳೂರು- 60, ಬೆಳಗಾವಿ-58, ಕಲಬುರಗಿ-55, ದಾವಣಗೆರೆ -45, ಶಿವಮೊಗ್ಗ, ತುಮಕೂರು ಹಾಗೂ ಬಳ್ಳಾರಿ ತಲಾ - 35 ಹಾಗೂ ವಿಜಯಪುರದಲ್ಲಿ 27 ವಾರ್ಡಗಳಿವೆ. ಹುಬ್ಬಳ್ಳಿ 5ನೇ ಸ್ಥಾನ ಹಾಗೂ ಧಾರವಾಡ ಕೊನೆ ಸ್ಥಾನ ಹೊಂದಲಿದೆ.