ಸಾರಾಂಶ
ಬರವಣಿಗೆಗೆ ಮನುಷ್ಯನ ಜೀವನವನ್ನು ಬದಲಾಯಿಸುವ ಅದ್ಭುತವಾದ ಶಕ್ತಿ ಇದೆ ಎಂದು ಹಿರಿಯ ಕ್ರೀಡಾಪಟು ಬಾಳೆಯಡ ಕಾಳಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬರವಣಿಗೆಗೆ ಮನುಷ್ಯನ ಜೀವನವನ್ನು ಬದಲಾಯಿಸುವ ಅದ್ಭುತವಾದ ಶಕ್ತಿ ಇದೆ ಎಂದು ಬ್ಲೂ ಡಾರ್ಟ್ ಸಲಹೆಗಾರ ಹಾಗೂ ಹಿರಿಯ ಕ್ರೀಡಾಪಟು ಬಾಳೆಯಡ ಕಾಳಪ್ಪ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 108ನೇ ಮತ್ತು ಲೇಖಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ರಚಿತ 10ನೇ ಪುಸ್ತಕ ‘ಜೇನು ಗೂಡು’ ಬಿಡುಗಡೆಗೊಳಿಸಿ ಮಾತನಾಡಿದರು.
ಪುಸ್ತಕಗಳು ಮನುಷ್ಯನ ಜೀವನದಲ್ಲಿ ಬದಲಾವಣೆಯನ್ನು ತರಲು ಶಕ್ತವಾಗಿವೆ. ಬರಹಗಾರರು ತಮಗಾಗಿ ಅಥವಾ ಸಮಾಜದ ಕಲ್ಯಾಣಕ್ಕಾಗಿ ಪುಸ್ತಕಗಳನ್ನು ಬರೆಯಬಹುದು. ಆದರೆ ಬರವಣಿಗೆಯಲ್ಲಿರುವ ಶಕ್ತಿ ಸಾಮಾಜಿಕ ಪರಿವರ್ತನೆಗೆ ಸಹಕಾರಿಯಾಗಿದೆ ಎಂದರು.‘ಜೇನು ಗೂಡು’ ಪುಸ್ತಕದ ಬರಹಗಾರ್ತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅಂಶಗಳು ಪುಸ್ತಕದಲ್ಲಿದ್ದು, ಓದುಗರು ಇದನ್ನು ಗಮನಿಸಿದರೆ ನನ್ನಲ್ಲಿ ಧನ್ಯತಾಭಾವ ಮೂಡಲಿದೆ. ಪ್ರತಿಯೊಬ್ಬರು ಪುಸ್ತಕ ಕೊಂಡು ಓದಿ ಎಂದು ಮನವಿ ಮಾಡಿದರು.
ಮಡಿಕೇರಿ ಕೊಡವ ಸಮಾಜದ ನಿರ್ದೇಶಕಿ ಬೊಪ್ಪಂಡ ಸರಳ ಕರುಂಬಯ್ಯ ಮಾತನಾಡಿ, ಮಕ್ಕಳು ಪುಸ್ತಕಗಳನ್ನು ಹೆಚ್ಚು ಓದಬೇಕು, ಈಗಿನ ಮಕ್ಕಳು ಇಂಗ್ಲಿಷ್ ಪುಸ್ತಕಗಳನ್ನಷ್ಟೇ ಓದುವ ಹವ್ಯಾಸ ಹೊಂದಿದ್ದಾರೆ. ಇಂಗ್ಲಿಷ್‌ನೊಂದಿಗೆ ಕನ್ನಡವನ್ನು ಕೂಡ ಓದಲಿ ಎಂದು ಕಿವಿಮಾತು ಹೇಳಿದರು.ಮೂರ್ನಾಡು ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟ ಅಧ್ಯಕ್ಷೆ ಪಳಂಗಂಡ ರೇಖಾ ತಮ್ಮಯ್ಯ ಮಾತನಾಡಿ, ‘ಜೇನು ಗೂಡು’ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿದರು.ಕೊಡವ ಮಕ್ಕಡ ಕೂಟದ ನಿರ್ದೇಶಕಿ ಹಾಗೂ ಬರಹಗಾರ್ತಿ ಕರವಂಡ ಸೀಮಾ ಗಣಪತಿ ಇದ್ದರು.