ಸತತವಾಗಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ 1980ರಿಂದ 2025ರ ವರೆಗೆ ಸತತ 8 ಬಾರಿ ಆಯ್ಕೆಯಾಗಿದ್ದು, 45 ವರ್ಷ ಪೂರೈಸಿದ್ದಾರೆ. ಈ ಅವಧಿ ಪೂರ್ಣಗೊಂಡ ಬಳಿಕ ಪರಿಷತ್ ಸದಸ್ಯರಾಗಿ 48 ವರ್ಷ ಆದಂತಾಗುತ್ತದೆ. ಇವರದು ಗಿನ್ನೀಸ್ ದಾಖಲೆಯಾಗಿದೆ.
ಹುಬ್ಬಳ್ಳಿ:
ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ ವತಿಯಿಂದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗೌರವ ಸನ್ಮಾನ ಸಮಾರಂಭ ಡಿ. 13ರಂದು ಸಂಜೆ 4 ಗಂಟೆಗೆ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಸತತವಾಗಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ 1980ರಿಂದ 2025ರ ವರೆಗೆ ಸತತ 8 ಬಾರಿ ಆಯ್ಕೆಯಾಗಿದ್ದು, 45 ವರ್ಷ ಪೂರೈಸಿದ್ದಾರೆ. ಈ ಅವಧಿ ಪೂರ್ಣಗೊಂಡ ಬಳಿಕ ಪರಿಷತ್ ಸದಸ್ಯರಾಗಿ 48 ವರ್ಷ ಆದಂತಾಗುತ್ತದೆ. ಇವರದು ಗಿನ್ನೀಸ್ ದಾಖಲೆಯಾಗಿದೆ ಎಂದರು.
ಈ ಭಾಗದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಗಿನ್ನಿಸ್ ದಾಖಲೆ ಮಾಡಿದ ವ್ಯಕ್ತಿ ಹೊರಟ್ಟಿ ಮಾತ್ರ. ಏಳು ಖಾತೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರ ಖಾತೆ ನಿಭಾಯಿಸಿದ್ದಾರೆ. ಅಂದು ಸಂಜೆ ೪ ಗಂಟೆಗೆ ಲ್ಯಾಮ್ಮಿಂಗ್ಟನ್ ಶಾಲೆಯಿಂದ ನೆಹರು ಮೈದಾನದ ವರೆಗೆ ಹೊರಟ್ಟಿ ದಂಪತಿಗಳ ಮೆರವಣಿಗೆ ಮಾಡಲಾಗುವುದು. ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿರುವ ಹೊರಟ್ಟಿ ಅವರ ಈ ಕಾರ್ಯಕ್ರಮದಲ್ಲಿ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡದ ಶಿಕ್ಷಕರು ಭಾಗವಹಿಸಲಿದ್ದು ಸುಮಾರು 20000 ಜನರ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭ ಉದ್ಘಾಟಿಸಲಿದ್ದು ಡಾ. ವೀರೇಂದ್ರ ಹೆಗ್ಗಡೆ ಸಾನ್ನಿಧ್ಯವ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಭಾಪತಿ ಯು.ಟಿ. ಖಾದರ್ ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಸಚಿವ ಎಚ್.ಕೆ. ಪಾಟೀಲ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಉದ್ಯಮಿ ವಿಜಯ ಸಂಕೇಶ್ವರ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಬಸವರಾಜ ಹೊರಟ್ಟಿ ಅವರು ಶಿಕ್ಷಕರು ಅಷ್ಟೇ ಅಲ್ಲದೇ ಶಿಕ್ಷಕೇತರ ಜನರಿಗೂ ಸಹಾಯ ಮಾಡಿದ್ದಾರೆ. ಇದರಿಂದ ಹಲವಾರ ಜಿಲ್ಲೆಗಳಿಂದ ಸಾವಿರಾರೂ ಶಿಕ್ಷಕರು ಸ್ವಯಂ ಪ್ರೇರಿತವಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಪಕ್ಷಾತೀತವಾಗಿ ಎಲ್ಲ ಮುಖಂಡರು ಸೇರಿ ಸಮಾರಂಭ ಮಾಡಲಾಗುತ್ತಿದೆ ಎಂದು ಹೇಳಿದರು.
ಸಮಿತಿ ಗೌರವ ಕಾರ್ಯದರ್ಶಿ ರಾಜಣ್ಣ ಕೊರವಿ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ವೀರೇಶ ಸಂಗಳದ, ಅನಿಲಕುಮಾರ ಪಾಟೀಲ, ರಾಜಶೇಖರ ಮೆಣಸಿನಕಾಯಿ, ವಿಕಾಸ ಸೊಪ್ಪಿನ ಸೇರಿದಂತೆ ಅನೇಕರು ಇದ್ದರು.