ಕ್ರಿಯಾಶೀಲ ಸಂಘಟಕ ಡಾ. ರವಿ ಗುಂಜೀಕರಗೆ ಇಂದು ಅಭಿನಂದನೆ

| Published : May 06 2025, 12:18 AM IST

ಸಾರಾಂಶ

ಕ್ರೀಯಾಶೀಲ ಸಂಘಟಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಜಿಲ್ಲಾ ಅಧಿಕಾರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ, ಜಿಲ್ಲಾ ಘಟಕದ ಅಧ್ಯಕ್ಷ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಮೇ.6 ಬೆಳಗ್ಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆಯಾಗಿದೆ.

ಗದಗ: ಕ್ರೀಯಾಶೀಲ ಸಂಘಟಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಜಿಲ್ಲಾ ಅಧಿಕಾರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ, ಜಿಲ್ಲಾ ಘಟಕದ ಅಧ್ಯಕ್ಷ ಡಾ. ರವಿ ಗುಂಜೀಕರ್ ಅವರ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಮೇ.6 ಬೆಳಗ್ಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆಯಾಗಿದೆ.

ಏಪ್ರಿಲ್ 30ರಂದೇ ಡಾ. ಗುಂಜೀಕರ್ ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಆದರೆ ಸಮಾಜ ಸೇವೆಗೆ ಅದೇ ದಿನವೇ ಅವರ ಅಭಿಮಾನಿ ಬಳಗ ಮುನ್ನುಡಿ ಬರೆದಿದೆ. ಜಿಲ್ಲಾ ಸರಕಾರಿ ನೌಕರರ ಸಂಘದ ಸರ್ವ ಸದಸ್ಯರು, ವಿವಿಧ ವೃಂದ ಸಂಘಗಳ ಆಶ್ರಯದಲ್ಲಿ ಕಳೆದ 5 ದಿನಗಳಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಮೇ 1ರಂದು 60 ಜನ ಪೌರ ಕಾರ್ಮಿಕರಿಗೆ ಸನ್ಮಾನ, ನೌಕರರ ಭವನದಲ್ಲಿ 60ಕ್ಕೂ ಹೆಚ್ಚು ಜನರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ, ಮಣಕವಾಡದ ಶ್ರೀಗಳ ನೇತೃತ್ವದಲ್ಲಿ 60 ಸಸಿ ನೆಡುವ ಮೂಲಕ ವನಮಹೋತ್ಸವ ಆಚರಣೆ, ಸರಕಾರಿ ಆಸ್ಪತ್ರೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಹಾಲು ಹಣ್ಣು ವಿತರಣೆ, ಮಹಿಳಾ ನೌಕರರ ದಿನಾಚರಣೆ ಅಂಗವಾಗಿ ಜಿಲ್ಲೆಯ 60 ಜನ ಸಾಧಕ ಮಹಿಳೆಯರಿಗೆ ವಿಶೇಷ ಸೇವಾ ಗೌರವ ನೀಡಿ ಸನ್ಮಾನಿಸಲಾಯಿತು. ಗುಂಜೀಕರ್ ತಾವು ಕಲಿತ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ ನಂ. 2ನ್ನು ದತ್ತು ತೆಗೆದುಕೊಂಡರು.

ಬಸವರಾಜ ಬಳ್ಳಾರಿ ಆಯ್ಕೆ; ಡಾ. ಗುಂಜೀಕರ್ ಸೇವಾ ನಿವೃತ್ತಿಯಿಂದ ತೆರವಾದ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗದಗ ತಾಲೂಕು ಅಧಿಕಾರಿ ಡಾ. ಬಸವರಾಜ ಬಳ್ಳಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ನಾಳೆ ನಡೆಯುವ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರದ 60 ಜನ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಸಾನ್ನಿಧ್ಯ, ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗಂಧರ್ವ ಇವೆಂಟ್ಸ್ ಬೆಂಗಳೂರು ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಡಾ. ರವಿ ಗುಂಜೀಕರ್ ತಮ್ಮ ಸಂಘಟನಾ ಶಕ್ತಿಯ ಮೂಲಕ ಸರಕಾರಿ ನೌಕರರ ಸಂಘಕ್ಕೆ ಗಟ್ಟಿ ನೆಲೆ ಒದಗಿಸಿದ್ದಾರೆ. ನಮ್ಮ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಮಾರ್ಗದರ್ಶನದಲ್ಲಿ ಸಂಘವನ್ನು ಮತ್ತಷ್ಟು ಬೆಳೆಸಿ, ಸಂಘಟಿಸುತ್ತೇನೆ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಹೇಳಿದರು.