ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಜಿಲ್ಲಾಧಿಕಾರಿ

| Published : May 19 2024, 01:49 AM IST

ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಫಲಿತಾಂಶದಿಂದ ಮುಂದಿನ ದಿನಗಳಲ್ಲಿ ನಿಮ್ಮ ಮೇಲಿನ ನಿರೀಕ್ಷೆ ಹೆಚ್ಚಾಗಲಿದ್ದು, ಆ ಒತ್ತಡವನ್ನು ಧನಾತ್ಮಕವಾಗಿ ತೆಗೆದುಕೊಂಡು ಮುನ್ನಡೆಯಬೇಕು. ಹಂತ ಹಂತವಾಗಿ ನೋಡಿದಾಗ ಸ್ಪರ್ಧೆ ಹೆಚ್ಚಾಗಿದ್ದು, ಅದರಲ್ಲಿ ನಾವು ಏನು ಅಲ್ಲ ಎಂದೆಂನಿಸುತ್ತದೆ. ಹಾಗಾಗಿ ಮನಸ್ಸನ್ನು ಎಲ್ಲಿಯೂ ಕುಗ್ಗದಂತೆ ನೋಡಿಕೊಂಡು ಗುರಿಯತ್ತ ಸಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ಅಂಕಪಡೆದ 10 ಮಂದಿಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ತಮ್ಮ ಕಚೇರಿ ಸಬಾಂಗಣದಲ್ಲಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ತೆಗೆದು ಸಾಧನೆ ಮಾಡಿದ್ದಾರೆ. ಈ ಯಶಸ್ಸು ನಿಮ್ಮ ಮುಂದಿನ ಗುರಿ ತಲುಪಲು ಸೇತುವೆಯಾಗಿ ಇನ್ನಷ್ಟು ಸಾಧನೆಯ ಗರಿ ನಿಮ್ಮ ಮೂಡಿಗೇರಲಿ ಎಂದು ಹಾರೈಸಿದರು.

ಈ ಫಲಿತಾಂಶದಿಂದ ಮುಂದಿನ ದಿನಗಳಲ್ಲಿ ನಿಮ್ಮ ಮೇಲಿನ ನಿರೀಕ್ಷೆ ಹೆಚ್ಚಾಗಲಿದ್ದು, ಆ ಒತ್ತಡವನ್ನು ಧನಾತ್ಮಕವಾಗಿ ತೆಗೆದುಕೊಂಡು ಮುನ್ನಡೆಯಬೇಕು. ಹಂತ ಹಂತವಾಗಿ ನೋಡಿದಾಗ ಸ್ಪರ್ಧೆ ಹೆಚ್ಚಾಗಿದ್ದು, ಅದರಲ್ಲಿ ನಾವು ಏನು ಅಲ್ಲ ಎಂದೆಂನಿಸುತ್ತದೆ. ಹಾಗಾಗಿ ಮನಸ್ಸನ್ನು ಎಲ್ಲಿಯೂ ಕುಗ್ಗದಂತೆ ನೋಡಿಕೊಂಡು ಗುರಿಯತ್ತ ಸಾಗಬೇಕು ಎಂದು ಅವರು ಹುರುದುಂಬಿಸಿದರು.

10ನೇ ತರಗತಿಯು ವಿದ್ಯಾರ್ಥಿ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದ್ದು. ನಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲು ಇದೊಂದು ಉತ್ತಮ ಸಮಯವಾಗಿದೆ. ನಿಮ್ಮ ಗುರಿ ಏನೆಂಬುದನ್ನು ಇಲ್ಲಿಯೇ ಅರಿತು ಅದರೊಂದಿಗೆ ಸಾಗಬೇಕಿದೆ ಎಂದರು.

ರ್ಯಾಂಕ್ ಬಂದ ಕೂಡಲೇ ಮುಂದಿನ ಭವಿಷ್ಯಕ್ಕೆ ಶ್ರಮ ಹಾಕುವುದನ್ನು ನಿಲ್ಲಿಸಬಾರದು. ಬದಲಾಗಿ ದಿನದಿಂದ ದಿನಕ್ಕೆ ಶ್ರಮ ದುಪ್ಪಟ್ಟಾಗಬೇಕು. ಸತತ ಪ್ರಯತ್ನದಿಂದ ಫಲಿತಾಂಶ ದೊರಕುವಂತೆ, ನಿಮ್ಮ ಸಾಧನೆ ಪೋಷಕರಿಗೆ ಹೆಮ್ಮೆ ತರಬೇಕು ಎಂದು ಅವರು ಹೇಳಿದರು.

ಕಾಲೇಜು ದಿನಗಳಿಗೆ ಕಾಲಿಡುತ್ತಿರುವ ನೀವು ಕೆಲವೊಂದು ವಿಷಯಗಳಿಂದ ಮನಸ್ಸು ಏರು-ಪೇರಾಗುವುದು ಸಹಜ. ಆದರೇ ಯಾವುದೇ ಒತ್ತಡಕ್ಕೆ ಒಳಗಾಗಿ ಕೆಟ್ಟ ಹವ್ಯಾಸ ರೂಡಿಸಿಕೊಳ್ಳಬಾರದು. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಇತರರಿಗೂ ಮಾದರಿಯಾಗಬೇಕು ಎಂದು ಅವರು ಸಲಹೆ ನೀಡಿದರು.

ಕೇವಲ ಓದಿಗಷ್ಟೇ ಸೀಮಿತವಾಗದೆ ಕ್ರೀಡೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮಾನಸಿಕ ಪರಿಸ್ಥಿತಿ ಹಾಗೂ ದೈಹಿಕ ಪರಿಸ್ಥಿತಿ ಉತ್ತಮವಾಗುವುದರ ಜೊತೆಗೆ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ತಲುಪಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಓದಿನ ಜೊತೆಗೆ ಒಂದಲ್ಲ ಒಂದು ರೀತಿಯ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದು ಅವರು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನುಮಾದರಿಯನ್ನಾಗಿಸಿಕೊಂಡು ದೊಡ್ಡ ಮಟ್ಟದ ಯಶಸ್ಸು ಸಾಧಿಸುವತ್ತಾ ನಿಮ್ಮ ಗುರಿ ಇರಲಿ. ವಿದ್ಯಾರ್ಥಿಗಳ ಜೀವನ ಎಂಬ ವಿಷಯಕ್ಕೆ ಬಂದರೆ ಪೋಷಕರ ಪಾತ್ರ ಬಹಳ ಮುಖ್ಯವಾಗಿದ್ದು ಅವರ ಹಾಗೂ ಹೋಗುಗಳನ್ನು ಸದಾ ಗಮನಿಸುತ್ತಿರಬೇಕು. ಮಾರ್ಗ ಸೂಚಿಸಬೇಕು ಎಂದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ಪ್ರಮುಖ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾದಾಗ ನಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಅವುಗಳನ್ನು ಮನಗಂಡು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇಷ್ಟು ದಿನ ಇದ್ದಂತಹ ಶಾಲಾ ವಾತಾವರಣವು ಮುಂದಿನ ದಿನಗಳಲ್ಲಿ ಬದಲಾಗುತ್ತದೆ. ವಿಭಿನ್ನ ರೀತಿಯ ವಾತಾವರಣಕ್ಕೆ ಹೊಂದಿಕೊಂಡು ಹೋಗಬೇಕಾಗುವ ಸನ್ನಿವೇಶ ಬರುವುದರಿಂದ ಅದಕ್ಕೆ ಎಲ್ಲಾ ವಿದ್ಯಾರ್ಥಿಗಳೂ ಮಾನಸಿಕವಾಗಿ ಇತರ ಆಗಬೇಕು. ಪ್ರತಿಯೊಬ್ಬರೂ ಸ್ವಯಂ ಜವಾಬ್ದಾರಿಯನ್ನು ತೆಗೆದುಕೊಂಡು, ಧೃತಿಗೆಡದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.

ಡಿಡಿಪಿಐ ಎಚ್.ಕೆ. ಪಾಂಡು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ 10 ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಇದ್ದರು.