ಕೇಂದ್ರ ಸಚಿವೆ ಶೋಭಾಗೆ ಅಭಿನಂದನೆ

| Published : Jun 18 2024, 01:32 AM IST / Updated: Jun 18 2024, 10:01 AM IST

ಸಾರಾಂಶ

ಕೇಂದ್ರದ ಸಣ್ಣ ಕೈಗಾರಿಕೆ ಮತ್ತು ಕಾರ್ಮಿಕ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮಿತ್ರಪಕ್ಷದಿಂದ ಅಭಿನಂದನೆ ಸಲ್ಲಿಸಲಾಯಿತು.

 ಬೆಂಗಳೂರು : ಕೇಂದ್ರದ ಸಣ್ಣ ಕೈಗಾರಿಕ ಮತ್ತು ಕಾರ್ಮಿಕ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮಿತ್ರಪಕ್ಷದಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ವೇಳೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಾಸಕ ಕೆ.ಗೋಪಾಲಯ್ಯ, ನಮ್ಮ ಕ್ಷೇತ್ರದ ಕಡೆಯಿಂದ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಅಂತರ ನೀಡಿದ್ದೇವೆ. ಶೋಭಾ ಕರಂದ್ಲಾಜೆ ಅವರಿಗೆ ಕಾರ್ಮಿಕ ಮತ್ತು ಅತಿ ಸಣ್ಣ ಕೈಗಾರಿಕಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರು ಮತ್ತು ನಾಯಕರು ಕೆಲಸಗಳನ್ನು ಸಚಿವರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, 32 ದಿನ ಚುನಾವಣೆ ಪ್ರಚಾರ ನಡೆಸಿದ್ದೇನೆ. ಇಷ್ಟು ಕಡಿಮೆ ಸಮಯದಲ್ಲಿ ಚುನಾವಣೆ ಎದುರಿಸಿ ಅತೀ ದೊಡ್ಡ ಗೆಲುವು ತಂದುಕೊಟ್ಟಿರುವುದು ಶ್ಲಾಘನೀಯ. ಕ್ಷೇತ್ರದ ಜನರಿಗೆ ಮುಖಂಡರಿಗೆ ಕಾರ್ಯಕರ್ತರಿಗೆ ಶಿರಬಾಗಿ ನಮಿಸುತ್ತೇನೆ ಎಂದು ಹೇಳಿದರು.

ರಾಷ್ಟ್ರ ಮಟ್ಟದಲ್ಲಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಸೀಟು ಬರಲಿಲ್ಲ. ಆದರೆ, ಜನರ ಆರ್ಶೀವಾದದಿಂದ ಮತ್ತೊಮ್ಮೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಮಾಡುತ್ತಿದ್ದಾರೆ. ಬೇರೆ ಬೇರೆ ಕಾರಣಕ್ಕೆ ಬಿಬಿಎಂಪಿ ಚುನಾವಣೆಯಾಗಿಲ್ಲ. ಆದಷ್ಟು ಬೇಗ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ಹರೀಶ್, ,ಮಾಜಿ ಶಾಸಕ ನರೇಂದ್ರಬಾಬು, ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.