ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ ಅಳಗೋಡು ಅವರ ಸಾಹಿತ್ಯ, ಶೈಕ್ಷಣಿಕ, ಕಲಾ ಸಾಧನೆಯನ್ನು ಪರಿಗಣಿಸಿ, ನಿಟ್ಟೂರಿನ ಶ್ರೀ ರಾಮೇಶ್ವರ ಮಕ್ಕಳ ಮೇಳ ಹಾಗೂ ಯಕ್ಷಗಾನಾಭಿಮಾನಿ ಬಳಗದ ಬೆಳ್ಳಿಯ ಕಡಗ, ಗದೆ, ‘ತುರಂಗ ಭಾರತ’ ಮಹಾಕಾವ್ಯದ 5 ಸಂಪುಟ, ಅಭಿನಂದನಪತ್ರ, ಗೌರವಧನ ನೀಡಿ ಹುಟ್ಟೂರು ಅಭಿನಂದನೆ ಸಲ್ಲಿಸಲಾಯಿತು.ಕಾರ್‍ಯಕ್ರಮದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಶ್ರೀಧರ ಡಿ. ಎಸ್. ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಡಾ. ಶಾಂತಾರಾಮ ಪ್ರಭು, ಕವಿ ಸುಧಾಕಿರಣ ಅಧಿಕಶ್ರೇಣಿ ಹಾಗೂ ಮಕ್ಕಳ ಮೇಳದ ಯಕ್ಷಗುರು ಸುಬ್ರಹ್ಮಣ್ಯ ಡಿ. ಎಸ್. ಉಪಸ್ಥಿತರಿದ್ದರು.ಸಮಾರಂಭದ ಅಂಗವಾಗಿ ಡಾ. ಶಿವಕುಮಾರರ ಕಂಸನ ಪಾತ್ರನಿರ್ವಹಣೆಯೊಂದಿಗೆ, ಮಕ್ಕಳ ಮೇಳದ ಪೂರ್ವ ವಿದ್ಯಾರ್ಥಿಗಳಿಂದ ‘ಕಂಸವಧೆ’, ಊರಿನ ಕಲಾವಿದರಿಂದ ಡಾ. ಶಿವಕುಮಾರ ಅಳಗೋಡು ರಚಿಸಿದ ‘ದಂಡಕ ದಮನ’ ಯಕ್ಷಗಾನ ಪ್ರದರ್ಶನಗೊಂಡಿತು.ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ, ಛಂದೋಬದ್ಧ ಯಕ್ಷಕವಿ ಡಾ. ಶಿವಕುಮಾರ ಅಳಗೋಡು ಅವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಮಂಡಿಸಿದ್ದ ‘ಯಕ್ಷಗಾನ ಪೂರ್ವರಂಗ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿದೆ.
ಕನ್ನಡ ಎಂ.ಎ.ನಲ್ಲಿ ಮಂಗಳೂರು ವಿವಿಯಲ್ಲಿ ದ್ವಿತೀಯ ರ್ಯಾಂಕ್ ಪಡೆದಿರುವ ಅವರು 9 ವಿಭಿನ್ನ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಅಳಗೋಡು ಸಮೀಪದ ಗೀತಾ ಮತ್ತು ಅನಂತಮೂರ್ತಿ ದಂಪತಿಗಳ ಪುತ್ರರಾಗಿದ್ದಾರೆ.