ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್‌ ಅಜೆಂಡ: ಕೆ.ಎಸ್.ಈಶ್ವರಪ್ಪ

| Published : Sep 17 2025, 01:05 AM IST

ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್‌ ಅಜೆಂಡ: ಕೆ.ಎಸ್.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್‌ ಸರ್ಕಾರದ ಮುಖ್ಯ ಅಜೆಂಡವಾಗಿದ್ದು, ಜಾತಿ ಜನಗಣತಿ ಹೆಸರಿನಲ್ಲಿ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಜಾತಿ ಜನಗಣತಿಯ ವಿವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್‌ ಸರ್ಕಾರದ ಮುಖ್ಯ ಅಜೆಂಡವಾಗಿದ್ದು, ಜಾತಿ ಜನಗಣತಿ ಹೆಸರಿನಲ್ಲಿ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಜಾತಿ ಜನಗಣತಿಯ ವಿವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22ರಿಂದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿಯನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಗಣತಿಯನ್ನು ಜಾತಿ ಗಣತಿಯನ್ನಾಗಿ ಪರಿವರ್ತಿಸಿ ಧರ್ಮ ಒಡೆಯುವ ಕೆಲಸಕ್ಕೆ ಮತ್ತೊಮ್ಮೆ ಕೈಹಾಕಿದೆ. ಈ ಹಿಂದೆ ನಡೆಸಿದ ಕಾಂತರಾಜ್ ವರದಿಯನ್ನೇ ಯಥಾವತ್ತಾಗಿ ಜಾರಿಗೆ ತರುತ್ತೇನೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರು ನಂತರ ಹೈಕಮಾಂಡ್ ಒತ್ತಡಕ್ಕೆ ಮಣಿದು ಮತ್ತೆ ಜನಗಣತಿ ಮಾಡುವುದಾಗಿ ಹೇಳಿದ್ದರು. 150 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿ ಮಾಡಿದ ಗಣತಿಯನ್ನು ಕಸದ ಬುಟ್ಟಿಗೆ ಎಸೆದು ಈಗ ಮತ್ತೆ ಸುಮಾರು 420 ಕೋಟಿ ರು. ವೆಚ್ಚದಲ್ಲಿ ಗಣತಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಈ ಹಿಂದಿನ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಮತಾಂತರಗೊಂಡ ಹಿಂದೂಗಳಿಗಾಗಿಯೇ ಹೆಚ್ಚುವರಿ ಜಾತಿಗಳನ್ನು ಸೃಷ್ಟಿಸಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಈ ರೀತಿ ಸುಮಾರು 50ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಹೆಸರಿನಲ್ಲಿ ಸೇರಿಸಿ ಹಿಂದೂಯೇತರ ಧರ್ಮೀಯರ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಹೆಚ್ಚು ತೋರಿಸುವ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಮೇಲೆ ಮಾತ್ರ ಆಸೆ ಇದೆ. ಮುಖ್ಯಮಂತ್ರಿ ಸ್ಥಾನ ಹೋಗುತ್ತೆ ಎಂಬ ಕಾಂತರಾಜ್ ವರದಿ ಒಪ್ಪಿಕೊಳ್ಳದೆ ಪುನಃ ಜಾತಿ ಜನಗಣತಿಗೆ ಅದೇಶ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾತಿ ಜನಗಣತಿ ಹೊರ ಬರಲು ಸಾಧ್ಯವಿಲ್ಲ ಎಂದು ಟೀಕಿಸಿದರು.ಆರೋಪ-ಪ್ರತ್ಯಾರೋಪ ಬಿಟ್ಟು ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿ:

ಶಿವಮೊಗ್ಗದ ವಿಮಾನ ನಿಲ್ದಾಣ ಆರಂಭಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಬ್ಬರ ಕೊಡುಗೆಯೂ ಇದೆ. ವಿಮಾನ ನಿಲ್ದಾಣ ವಿಚಾರದಲ್ಲಿ ರಾಜಕೀಯ ಮಾಡದೆ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಇಬ್ಬರೂ ಕೂತು ಚರ್ಚೆ ನಡೆಸಿ ಅಭಿವೃದ್ಧಿಪಡಿಸಬೇಕು ಎಂದು ಕೆ.ಎಸ್‌.ಈಶ್ವರಪ್ಪ ಸಲಹೆ ನೀಡಿದರು.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಿಸ್ಟಮ್ ಅಳವಡಿಕೆ ಆಗದಿರುವುದು ಹಲವು ಬಾರಿ ವಿಮಾನ ಲ್ಯಾಂಡ್ ಆಗಲು ತೊಂದರೆ ಆಗಿರುವ ಘಟನೆಗಳು ನಡೆದಿವೆ. ಈ ವಿಷಯದಲ್ಲಿ ಸಂಸದರು ಹಾಗೂ ಸಚಿವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿರುವುದು ನಡೆದಿದೆ. ಆರೋಪ-ಪ್ರತ್ಯಾರೋಪವನ್ನು ಬಿಟ್ಟು ಇಬ್ಬರೂ ಸೇರಿ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಧಾನಿ ಮೋದಿಗೆ ಇನ್ನಷ್ಟು ಶಕ್ತಿ ಕೊಡಲಿ: ನರೇಂದ್ರ ಮೋದಿ ಶರೀರದಲ್ಲಿ ಭಗವಂತ ತುಂಬಿಕೊಂಡಿದ್ದಾನೆ. ಅವರ ಜನ್ಮದಿನ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಶುಭ ಕೋರುತ್ತೇನೆ. ಜೊತೆಗೆ ಮೊನ್ನೆ ನಡೆದ ಏಷ್ಯಾ ಕಪ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ- ಪಾಕಿಸ್ತಾನ ಆಟ ಆಡದಿದ್ದರೆ ಒಲಿಂಪಿಕ್ ನಲ್ಲಿ ಆಡಲು ಬರುತ್ತಿರಲಿಲ್ಲ. ಹೀಗಾಗಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಪಂದ್ಯವಾಡಿದೆ. ಆದರೆ, ಭಾರತ ಕ್ರಿಕೆಟ್ ಆಟಗಾರರು ಅವರ ಮುಖ ನೋಡಲಿಲ್ಲ. ಪಂದ್ಯದ ಬಳಿಕ ಪಾಕ್‌ ಆಟಗಾರರಿಗೆ ಕೈ ಕೊಡಲಿಲ್ಲ. ರಾಷ್ಟ್ರಭಕ್ತಿ ಎಷ್ಟಿದೆ ಎಂಬುದನ್ನು ಅವರು ತೋರಿಸಿದ್ದಾರೆ. ಇದಕ್ಕೆ ಎಲ್ಲ ಆಟಗಾರರನ್ನು ಅಭಿನಂದಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿದ್ದರಾಮಯ್ಯ ಜಾತಿ ಜಾತಿಗೆ ಧರ್ಮ ಧರ್ಮಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದು ಕೇವಲ ಹಿಂದೂ ಸಮಾಜದ ಮೇಲೆ ಮಾತ್ರ ಅಲ್ಲ ಕ್ರಿಶ್ಚಿಯನ್ ಮೇಲು ಎಫೆಕ್ಟ್ ಆಗುತ್ತದೆ. ನೇಪಾಳ ಮತ್ತು ಬರ್ಮಾ ದೇಶದಂತೆ ಕರ್ನಾಟಕದಲ್ಲಿ ಕ್ರಾಂತಿ ಆಗಬೇಕಾ? ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಇ.ವಿಶ್ವಾಸ್, ಕುಬೇರಪ್ಪ ಇದ್ದರು.

ಹಿಂದುಗಳು ಹಬ್ಬ ಮಾಡುವುದೇ ತಪ್ಪಾ?:

ಹಿಂದೂಗಳು ಹಬ್ಬವನ್ನೇ ಆಚರಿಸಬಾರದು ಎಂದು ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದಂತಿದೆ ಎಂದು ಕೆ.ಎಸ್‌.ಈಶ್ವರಪ್ಪ ಟೀಕಿಸಿದರು. ಗಣಪತಿ ಮೆರವಣಿಗೆಯಲ್ಲಿ ಮಸೀದಿಯಿಂದ ಕಲ್ಲು ತೂರುತ್ತಾರೆ. ಮಹಡಿ ಮನೆಗಳ ಮೇಲೆ ನಿಂತು ಉಗಿಯುತ್ತಾರೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುತ್ತಾರೆ. ಆದರೂ ಈ ಸರ್ಕಾರ ಸುಮ್ಮನಿದೆ. ಈ ರಾಜ್ಯ ಸರ್ಕಾರ ಮುಸಲ್ಮಾನರ ರಕ್ತದಲ್ಲಿಯೇ ಆಡಳಿತ ನಡೆಸುತ್ತಿದೆಯೇ ? , ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಒದ್ದು ಒಳಗೆಹಾಕಬೇಕು. ಈ ಬಗ್ಗೆ ನಾವು ಮಾತನಾಡಿದರೆ ಕೋಮುವಾದಿಗಳು ಎಂದು ಕರೆಯುತ್ತಾರೆ ಎಂದರು.

ಶಿವಮೊಗ್ಗದಲ್ಲಿ ಎರಡೂ ಧರ್ಮದ ಮೆರವಣಿಗೆಗಳು ಯಾವ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ನಡೆದಿದೆ. ಇದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.