ಎಸ್ಐಆರ್ ಬಗ್ಗೆ ಅಪಸ್ವರ ಎತ್ತಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರದಲ್ಲಿದ್ದಾಗ ಈ ವಿಶೇಷ ಮತ ಪಟ್ಟಿ ಪರಿಷ್ಕರಣೆ ಕರ್ಯ ನಡೆದಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು. 1952 ರಿಂದ ಈವರೆಗೆ ದೇಶದಲ್ಲಿ 12 ಬಾರಿ ಎಸ್ಐಆರ್ ಪ್ರಕ್ರಿಯೆ ನಡೆದಿದೆ. ಈ ಅವಧಿಯಲ್ಲಿ ಕೇವಲ 2 ಬಾರಿ ಮಾತ್ರ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆದರೆ ಉಳಿದಂತೆ ಯುಪಿಎ ಸರ್ಕಾರವೇ ಅಧಿಕಾರದಲ್ಲಿತ್ತು. ಆದರೆ ಕಾಂಗ್ರೆಸ್ ಪಕ್ಷ ಈಗ ದೇಶದ ಜನರಿಗೆ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಏನು ಹೇಳಲು ಹೊರಟಿದೆ ಎಂದು ಅವರು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ದೇಶಾದ್ಯಂತ ಕಾಂಗ್ರೆಸ್ ಪಕ್ಷ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದು, ದೇಶ ವಿರೋಧಿ ವ್ಯಕ್ತಿಗಳಿಗೆ, ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಪ್ರಜಾತಂತ್ರ ವಿರೋಧಿ ನಡೆ ತೋರುತ್ತಿದೆ ಎಂದು ಕೇಂದ್ರದ ಅತಿಸಣ್ಣ, ಸಣ್ಣ ಮಧ್ಯಮ ಕೈಗಾರಿಕೆ, ಕಾರ್ಮಿಕ ಹಾಗೂ ಉದ್ಯೋಗ ಖಾತೆಗಳ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ ಎಂಬ ಆಂದೋಲನವನ್ನು ಬಿಜೆಪಿ ಹಮ್ಮಿಕೊಂಡಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕರ ಈ ಕುತಂತ್ರ ನಡೆಸಲು ಬಿಡುವುದಿಲ್ಲ ಎಂದು ಅವರು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 79ವರ್ಷ ಕಳೆದಿದೆ. ಹಿರಿಯರು ಕಷ್ಟಪಟ್ಟು ಗಳಿಸಿಕೊಟ್ಟ ಸ್ವಾತಂತ್ರ್ಯಕ್ಕೆ ವಿದೇಶಿಯರ ಮಾತು ಕೇಳಿ ಧಕ್ಕೆ ತರಲು ಒಂದು ಗುಂಪು ಹವಣಿಸುತ್ತಿದೆ ಎಂದು ಅವರು ದೂರಿದರು.ಹಿರಿಯರ ತ್ಯಾಗ, ಬಲಿದಾನ, ಹೋರಾಟದ ಮೂಲಕ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯಾವುದೇ ಕಾರಣಕ್ಕೂ ಸ್ವಾತಂತ್ರ್ಯವನ್ನು ಅಳಿಸಲು ನಾವು ಅವಕಾಶ ಕೊಡುವುದಿಲ್ಲ. ಸ್ವಾತಂತ್ರ್ಯ ಕಳೆದುಕೊಳ್ಳಲು ನಾವು ಸಿದ್ಧರಿಲ್ಲ ಎಂದು ಗುಡುಗಿದರು.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದೇಶದ ಸಮಗ್ರ ಪ್ರಗತಿಗಾಗಿ ಆಡಳಿತ ಮತ್ತು ಪ್ರತಿಪಕ್ಷ ಜತೆ ಜತೆಯಾಗಿ ಹೋಗಬೇಕು. ಆಡಳಿತ ಪಕ್ಷ ಒಂದು ವೇಳೆ ತಪ್ಪು ಮಾಡಿದರೆ ವಿಪಕ್ಷ ಅದನ್ನು ವಿರೋಧಿಸಿ ಎಚ್ಚರಿಸುವ ಮೂಲಕ ಸರಿ ದಾರಿಗೆ ತರುವ ಕೆಲಸ ಮಾಡಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಮಾನ ಮಾಡುವ ರೀತಿ ಹೋದೆಡೆಯಲ್ಲೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಸಂಸದರಾಗಿ 10ವರ್ಷದ ಅವಧಿಯಲ್ಲಿ ಯಾವತ್ತೂ ಕೂಡಾ ಪ್ರಜಾತಂತ್ರ ರೀತಿಯಂತೆ ನಡೆದುಕೊಂಡಿಲ್ಲ. ವಿದೇಶಕ್ಕೆ ಹೋದಾಗ ದೇಶ ಅವಹೇಳನ ಮಾಡಿ ಮಾತನಾಡುತ್ತಾರೆ. ನಮ್ಮ ದೇಶದ ತನಿಖಾ ಸಂಸ್ಥೆಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡುವುದನ್ನು ಬಿಟ್ಟು ವಿದೇಶದಲ್ಲಿ ಮಾತನಾಡುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.ಎಸ್ಐಆರ್ ಬಗ್ಗೆ ಅಪಸ್ವರ ಎತ್ತಿರುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರದಲ್ಲಿದ್ದಾಗ ಈ ವಿಶೇಷ ಮತ ಪಟ್ಟಿ ಪರಿಷ್ಕರಣೆ ಕರ್ಯ ನಡೆದಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು. 1952 ರಿಂದ ಈವರೆಗೆ ದೇಶದಲ್ಲಿ 12 ಬಾರಿ ಎಸ್ಐಆರ್ ಪ್ರಕ್ರಿಯೆ ನಡೆದಿದೆ. ಈ ಅವಧಿಯಲ್ಲಿ ಕೇವಲ 2 ಬಾರಿ ಮಾತ್ರ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆದರೆ ಉಳಿದಂತೆ ಯುಪಿಎ ಸರ್ಕಾರವೇ ಅಧಿಕಾರದಲ್ಲಿತ್ತು. ಆದರೆ ಕಾಂಗ್ರೆಸ್ ಪಕ್ಷ ಈಗ ದೇಶದ ಜನರಿಗೆ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಏನು ಹೇಳಲು ಹೊರಟಿದೆ ಎಂದು ಅವರು ಪ್ರಶ್ನಿಸಿದರು.ಮುಖ್ಯ ಚುನಾವಣಾ ಆಯುಕ್ತರನ್ನು 2023ರ ವರೆಗೆ ಅಧಿಕಾರದಲ್ಲಿದ್ದ ಸರ್ಕಾರಗಳೇ ನೇಮಕ ಮಾಡುತ್ತಿದ್ದವು. ಆದರೆ ಸುಪ್ರೀಂ ಕರ್ಟ್ ಈ ಪ್ರಕ್ರಿಯೆ ಸರಿಯಿಲ್ಲ ಎಂದು ಹೇಳಿ, ಲೋಕಸಭೆಯಲ್ಲಿ ಚರ್ಚಿಸಿ ವಿಪಕ್ಷ ನಾಯಕರು ಒಳಗೊಂಡಂತೆ ಮೂರು ಜನ ಸದಸ್ಯರ ಸಮಿತಿ ಮುಖ್ಯ ಚುನಾವಣಾ ಆಯುಕ್ತರ ನೇಮಕ ಮಾಡಲು ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಹಾಗಾಗಿ 2025ರಲ್ಲಿ ನೇಮಕಗೊಂಡ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ಅವರನ್ನು ಯಾರು ನೇಮಕ ಮಾಡಿದವರು ಎಂಬುದನ್ನು ಪ್ರತಿಪಕ್ಷ ನಾಯಕ ರಾಹುಲ್ಗಾಂಧಿ ಸೇರಿ ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಚಿದಾನಂದ ಎಂ. ಗೌಡ, ಅಂಬಿಕಾ ಹುಲಿನಾಯ್ಕರ್, ವೈ.ಎಚ್. ಹುಚ್ಚಯ್ಯ ಉಪಸ್ಥಿತರಿದ್ದರು.