ಮತದಾನ ದಿನದಂದು ಸಂಜೆಯಾದ ನಂತರ ಮತದಾನ ಪ್ರಮಾಣ ಹೆಚ್ಚು ಮಾಡಿಕೊಂಡು ಅಧಿಕಾರ ಹಿಡಿದ ಬಿಜೆಪಿ ಈಗ ಸೀಟ್ ಚೋರಿಗೆ ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ದೇಶದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಆಡಳಿತ ತರುವ ಹುನ್ನಾರ ಅಡಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಪುನರ್ ವಿಂಗಡೆ ಜಾರಿಯಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ದೊಡ್ಡ ಅನ್ಯಾಯವಾಗಲಿದೆ ಎಂದರು.ಮತದಾನ ದಿನದಂದು ಸಂಜೆಯಾದ ನಂತರ ಮತದಾನ ಪ್ರಮಾಣ ಹೆಚ್ಚು ಮಾಡಿಕೊಂಡು ಅಧಿಕಾರ ಹಿಡಿದ ಬಿಜೆಪಿ ಈಗ ಸೀಟ್ ಚೋರಿಗೆ ಮುಂದಾಗಿದೆ. ಸಂಸತ್ತಿನಲ್ಲಿ ಅಗತ್ಯ ಬಹುಮತ ಪಡೆಯಲು ವಿರೋಧ ಪಕ್ಷದ ಸಂಸದರಿಗೆ ತಲಾ 150 ಕೋಟಿ ರೂ. ನೀಡಿ ಖರೀದಿಸಲಾಗಿದೆ ಎಂದು ಅವರು ದೂರಿದರು.ಸೋಮವಾರ ಆರಂಭವಾಗುವ ಸಂಸತ್ ಅಧಿವೇಶನ ದೇಶದ ವ್ಯವಸ್ಥೆಯ ದಿಕ್ಕನ್ನು ಬದಲಾಯಿಸುವ ಅಧಿವೇಶನವಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯ ಮಸೂದೆ ಜಾರಿಗೆ ಬಂದರೆ ಹಿಟ್ಲರ್ ಮೋದಿ ಮತ್ತು ಅಮಿತ್ ಶಾ ಯುಗ ಆರಂಭವಾಗಲಿದೆ, ಪ್ರಜಾಪ್ರಭುತ್ವದ ಕಗ್ಗೊಲೆಯಾಗಲಿದೆ. ಸೀಟುಗಳ ಹೆಚ್ಚಳ ಮಾಡಿಕೊಂಡು ಇನ್ನೂ 25 ರಿಂದ 50 ವರ್ಷಗಳ ಕಾಲ ದೇಶ ಮತ್ತು ಎಲ್ಲಾ ರಾಜ್ಯಗಳಲ್ಲಿ ಆಳ್ವಿಕೆ ಮಾಡುವ ಹುನ್ನಾರ ಇದಾಗಿದೆ ಎಂದು ಅವರು ಆರೋಪಿಸಿದರು.ಕಳೆದ ಎರಡು ವರ್ಷಗಳಲ್ಲಿ ಅಸ್ಸಾಂ, ಹರಿಯಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರಗಳ ಮರು ವಿಂಗಡಣೆ ಮೂಲಕ ಒಂದು ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ವಿಂಗಡಿಸಲಾಗಿದೆ. 2027 ರವರೆಗೆ ಕಾಯದೆ ಈಗಲೇ ಮಸೂದೆ ಮಂಡಿಸಲು ಮುಂದಾಗಿದ್ದು, ಉತ್ತರಪ್ರದೇಶದ ಚುನಾವಣೆ ಗೆಲ್ಲಲು ಈ ತಂತ್ರ ಹೂಡಲಾಗಿದೆ ಎಂದು ಅವರು ದೂರಿದರು.ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಎರಡು ದನ ಕೊಡಿಸುವುದಾಗಿ ಹೇಳಿದ್ದಾರೆ. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಈಗಿರುವ 2000 ರೂ. ಸೇರಿದಂತೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದರು.ಮಾಜಿ ಸಂಸದ ಪ್ರತಾಪ್ ಸಿಂಹ ಕೇರಳದವರಿಗೆ ಆಸ್ತಿ ಖರೀದಿಸಲು ಕೊಡಬಾರದು ಎಂದಿದ್ದಾರೆ. ಕೇರಳ ಪಾಕಿಸ್ತಾನದಲ್ಲಿಲ್ಲ, ಭಾರತದಲ್ಲೇ ಇದೆ. ಕಾಸರಗೋಡಿನಲ್ಲಿರುವವರೆಲ್ಲರೂ ಕನ್ನಡಿಗರಾಗಿದ್ದು, ಅಲ್ಲಿಂದ ಅವರನ್ನು ವಾಪಸ್ ಕಳುಹಿಸಲಾಗದು. ಎಲ್ಲರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಹೇಳಿದರು.ಅಡ್ಡಂಡ ಕಾರ್ಯಪ್ಪ ಅವರ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿ ನಾಟಕ ಮಾಡಿದರೂ ಸರ್ಕಾರ ಮೌನವಾಗಿರುವುದು ಬೇಸರದ ಸಂಗತಿ. ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಈ ನಾಟಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕಾರ್ಯದರ್ಶಿ ಗಿರೀಶ್ ನಾಯಕ, ವಕ್ತಾರ ಕೆ. ಮಹೇಶ್ ಇದ್ದರು.