ಬಿಜೆಪಿಯ ಭದ್ರ ಕೋಟೆಯಲ್ಲಿ ಕಾಂಗ್ರೆಸ್‌ ಬೃಹತ್‌ ಶಕ್ತಿ ಪ್ರದರ್ಶನ

| Published : Feb 18 2024, 01:33 AM IST / Updated: Feb 18 2024, 12:39 PM IST

Congress Samavesha
ಬಿಜೆಪಿಯ ಭದ್ರ ಕೋಟೆಯಲ್ಲಿ ಕಾಂಗ್ರೆಸ್‌ ಬೃಹತ್‌ ಶಕ್ತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಹಸ್ರಾರು ಮಂದಿ ಕಾರ್ಯಕರ್ತರು, ಸಾರ್ವಜನಿಕರು ಸಮಾವೇಶದಲ್ಲಿ ಕಿಕ್ಕಿರಿದು ಸೇರಿದ್ದರು. ಈ ಮೂಲಕ ಕೇಸರಿ ನೆಲದಲ್ಲಿ ಕೈ ಪಕ್ಷ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ ನೆಲದಿಂದಲೇ ಕಾಂಗ್ರೆಸ್‌ ಈ ಬಾರಿ ಲೋಕಸಭಾ ಚುನಾವಣೆಯ ರಣಕಹಳೆ ಮೊಳಗಿಸಿದ್ದು, ಬೃಹತ್‌ ಶಕ್ತಿ ಪ್ರದರ್ಶನವನ್ನೂ ಮಾಡಿದೆ. ಅಲ್ಲದೆ, ರಾಜ್ಯ, ದೇಶಕ್ಕೆ ‘20 ಸೀಟ್‌’ ಸಂದೇಶವನ್ನು ಒಕ್ಕೊರಲಿನಿಂದ ರವಾನಿಸಿದೆ.

ಕಳೆದ ಲೋಕಸಭೆ, ವಿಧಾನಸಭೆ ಚುನಾವಣೆಗಳಿಂದ ಕಂಗೆಟ್ಟಿದ್ದ ಕರಾವಳಿಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಈ ಸಮಾವೇಶ ಬೂಸ್ಟ್‌ ನೀಡಿದೆ. ಪರಿಣಾಮವಾಗಿ ಸಹಸ್ರಾರು ಮಂದಿ ಕಾರ್ಯಕರ್ತರು, ಸಾರ್ವಜನಿಕರು ಸಮಾವೇಶದಲ್ಲಿ ಕಿಕ್ಕಿರಿದು ಸೇರಿದ್ದರು. 

ಈ ಮೂಲಕ ಕೇಸರಿ ನೆಲದಲ್ಲಿ ಕೈ ಪಕ್ಷ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಮೂವರೂ ಕರಾವಳಿ ಸೇರಿದಂತೆ 20 ಸೀಟ್‌ ಗೆದ್ದೇ ಗೆಲ್ತೇವೆ ಎಂಬ ಖಚಿತ ಭರವಸೆ ವ್ಯಕ್ತಪಡಿಸಿ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿದ್ದಾರೆ.

ಕರಾವಳಿ ಟಾರ್ಗೆಟ್‌?
ಸಮಾವೇಶದಲ್ಲಿ ತಮ್ಮ ಭಾಷಣದ ಮೊದಲಾರ್ಧದುದ್ದಕ್ಕೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ‍ಾವಳಿಗೆ ಕಾಂಗ್ರೆಸ್‌ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಕರಾವಳಿಯ ಲಕ್ಷಾಂತರ ಮಂದಿ ಕಡು ಬಡವರು ಭೂ ಮಾಲೀಕರಾಗಿ ಶ್ರೀಮಂತರಾದ ಕಥೆಯನ್ನು ಸವಿಸ್ತಾರವಾಗಿ ವಿವರಿಸಿದರು. 

ಈ ಹಿಂದೆ ಇಷ್ಟು ಸುದೀರ್ಘವಾಗಿ ರಾಷ್ಟ್ರೀಯ ನಾಯಕರೊಬ್ಬರು ಕರಾವಳಿಯನ್ನು ಟಾರ್ಗೆಟ್‌ ಮಾಡಿ ಮಾತನಾಡಿದ್ದು ತೀರ ವಿರಳ. ಈ ಮೂಲಕ ಬಿಜೆಪಿ ಕೋಟೆಯ ಮತದಾರರಿಗೆ ಕಾಂಗ್ರೆಸ್‌ನ ಉಪಕಾರ ಸ್ಮರಣೆಯ ನೆನಪು ಮಾಡಿ ಸೆಳೆಯುವ ತಂತ್ರವೂ ಈ ಸಮಾವೇಶದ ಮೂಲಕ ನಡೆಯಿತು.

ಮೊದಲ ಚುನಾವಣಾ ಸಮಾವೇಶ: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಕೈ ಪಕ್ಷ ಗೆದ್ದು ಬೀಗಿದ್ದರೂ ಕರಾವಳಿಯ ದ.ಕ., ಉಡುಪಿಯಲ್ಲಿ ಗೆದ್ದದ್ದು ಎರಡೇ ಸೀಟುಗಳು. 

ಅಲ್ಲದೆ, ಕಳೆದ ಮೂರು ದಶಕಗಳಿಂದ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಾಗಿಲ್ಲ. ಆದರೂ ರಾಜ್ಯದ ಇತರೆಡೆ ಬಿಟ್ಟು ತನ್ನ ಮೊದಲ ಚುನಾವಣಾ ಸಮಾವೇಶಕ್ಕೆ ಮಂಗಳೂರನ್ನೇ ಆಯ್ದುಕೊಂಡಿದ್ದು ಗಮನಾರ್ಹ. 

ಬಿಜೆಪಿ ಕೋಟೆಯಲ್ಲೇ ಶಕ್ತಿ ಪ್ರದರ್ಶನ ಮಾಡಿ ಎದುರಾಳಿಗಳಿಗೆ ಸಂದೇಶ ನೀಡುವ ಪ್ರಯತ್ನ ಈ ಸಮಾವೇಶದ ಮೂಲಕ ನಡೆದಿದೆ.

ಸಾವಿರಾರು ಜನರಿಗೆ ಆಸನದ ವ್ಯವಸ್ಥೆ: ಬಿಸಿಲ ಧಗೆ ಜಾಸ್ತಿಯೇ ಇದ್ದುದರಿಂದ ವಿಶಾಲವಾದ ಸಭಾಂಗಣದಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಬಹೃತ್‌ ಪೆಂಡಾಲ್‌, ಬಂದವರಿಗೆಲ್ಲರಿಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹೊರ ಜಿಲ್ಲೆಗಳಿಂದ ಬೆಳಗ್ಗಿನಿಂದಲೇ ಕಾರ್ಯಕರ್ತರು, ನಾಯಕರು ಆಗಮಿಸತೊಡಗಿದ್ದರು. ಎಲ್ಲ ವಾಹನಗಳಿಗೆ ಕಾಲೇಜಿನ ಆಸುಪಾಸಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಸಭಾಂಗಣದ ಸುತ್ತಮುತ್ತ ಎಲ್‌ಇಡಿ ಸ್ಕ್ರೀನ್‌, ಮೈಕ್‌ ವ್ಯವಸ್ಥೆ ಮಾಡಲಾಗಿತ್ತು. ಸಮಾವೇಶದ ಹೊರಗಿನ ರಸ್ತೆಯಲ್ಲಿ ಐಸ್‌ ಕ್ರೀಂ, ಲೈಮ್‌ ಸೋಡಾ, ಚುರುಮುರಿ, ಕಲ್ಲಂಗಡಿ, ಐಸ್‌ ಕ್ಯಾಂಡಿ ಮಾರಾಟದ ಜತೆಗೆ ಕಾಂಗ್ರೆಸ್‌ ಧ್ವಜ, ಶಾಲು, ಟೋಪಿ ವ್ಯಾಪಾರವೂ ನಡೆದಿತ್ತು. ಕಾಂಗ್ರೆಸ್‌ ಬಾವುಟ, ಫ್ಲೆಕ್ಸ್‌ ಬ್ಯಾನರ್‌ಗಳು ರಸ್ತೆಯುದ್ದಕ್ಕೂ ರಾರಾಜಿಸುತ್ತಿದ್ದವು.

ಮತ್ತೆ ಸದ್ದು ಮಾಡಿದ ‘ಹುಲಿಯಾ’: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲು ಮುಂದಾಗುತ್ತಿದ್ದಂತೆ ಭಾರೀ ಜೈಕಾರ, ಘೋಷಣೆ ಸಭಿಕರಿಂದ ಕೇಳಿಬಂತು. ನಡುವೆ ‘ಹುಲಿಯಾ’, ‘ಟಗರು’ ಧ್ವನಿಯೂ ಕೇಳಿಬಂತು. 

ವಂದೇ ಮಾತರಂ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಅಕ್ಕಿ ತುಂಬಿದ ಕಳಸೆಯಲ್ಲಿ ಇಟ್ಟಿದ್ದ ತೆಂಗಿನ ಹಿಂಗಾರದ ಹೂವನ್ನು ಅರಳಿಸುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶಕ್ಕೆ ಚಾಲನೆ ನೀಡಿದರು.