ಬಿಜೆಪಿ ವಿರುದ್ಧ ಆರೋಪಕ್ಕೆ ಗಣಿಗ ರವಿಗೆ ಕಾಂಗ್ರೆಸ್ ಸುಪಾರಿ

| Published : Aug 28 2024, 12:55 AM IST

ಬಿಜೆಪಿ ವಿರುದ್ಧ ಆರೋಪಕ್ಕೆ ಗಣಿಗ ರವಿಗೆ ಕಾಂಗ್ರೆಸ್ ಸುಪಾರಿ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಯಾರೂ ಸಹ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿಲ್ಲ. ಸ್ವಯಂಕೃತ ತಪ್ಪುಗಳಿಂದ ತಾನೇ ತಾನಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪತನವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದಾವಣಗೆರೆಯಲ್ಲಿ ಭ‍ವಿಷ್ಯ ನುಡಿದಿದ್ದಾರೆ.

- ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಿಲ್ಲ: ರೇಣುಕಾಚಾರ್ಯ ಹೇಳಿಕೆ - ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶೀಘ್ರ ಪತನ । ಸಿದ್ದುಗೆ ಕೆಲವರು ಬಾಹ್ಯ ಬೆಂಬಲ ನೀಡಿ ಒಳಗೊಳಗೆ ಸಿಎಂ ರೇಸ್‌ನಲ್ಲಿದ್ದಾರೆ: ಟೀಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಯಾರೂ ಸಹ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿಲ್ಲ. ಸ್ವಯಂಕೃತ ತಪ್ಪುಗಳಿಂದ ತಾನೇ ತಾನಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪತನವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭ‍ವಿಷ್ಯ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸಹಿಸಲಾಗದೇ, ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂಬ ಅಪಪ್ರಚಾರ ಮಾಡಿದ್ದಾರೆ. ಈ ಸರ್ಕಾರವನ್ನು ಅಸ್ಥಿರಗೊಳಿಸಲು ನಮ್ಮ ಪಕ್ಷದವರು ಮಾಡಿಲ್ಲ. ರಾಜ್ಯಪಾಲರು, ರಾಜಭವನವನ್ನೂ ಬಿಜೆಪಿ ದುರ್ಬಳಕೆ ಮಾಡಿಕೊಂಡಿಲ್ಲ ಎಂದರು.

ಒಳಗೊಳಗೇ ಸಿಎಂ ಕುರ್ಚಿಗೆ ರೇಸ್‌:

ಸಿದ್ದರಾಮಯ್ಯಗೆ ಬಾಹ್ಯ ಬೆಂಬಲ ನೀಡುತ್ತಿದ್ದರೂ, ಒಳಗೊಳಗೆ ನಾನು ಮುಖ್ಯಮಂತ್ರಿ, ನಾನು ಮುಖ್ಯಮಂತ್ರಿ ಆಗಬೇಕು ಎಂಬುದಾಗಿ ಎಲ್ಲರೂ ರೇಸ್‌ನಲ್ಲಿ ಓಡುತ್ತಿದ್ದಾರೆ. ಮತ್ತೊಂದು ಕಡೆ ಅನೇಕ ಸಚಿವರು, ಮಂಡ್ಯದ ಶಾಸಕ ಗಣಿಗ ರವಿ ಇತರರು ₹100 ಕೋಟಿ ಆಫರ್ ಮಾಡಿದ್ದಾರೆಂದು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಮುನ್ನ ₹50 ಕೋಟಿ ಆಫರ್ ಅಂದ್ರು, ಈಗ ₹100 ಕೋಟಿ ಅಂತಿರಾ? ₹100 ಕೋಟಿ ಅಂದರೆ ಅಷ್ಟು ಸುಲಭನಾ? ಹುಡುಗಾಟನಾ ಎಂದು ರೇಣುಕಾಚಾರ್ಯ ಹರಿದಾಯ್ದರು.

ಕಾಂಗ್ರೆಸ್ಸಿನ ನಿಮಗೆ ಹಗರಣ ಮಾಡಿ, ಭ್ರಷ್ಟಾಚಾರ ಮಾಡಿ ಅಭ್ಯಾಸ ಇದೆ. ಈ ಸರ್ಕಾರದ ಮೇಲೆ ಬಂದ ಹಗರಣಗಳು ಆಗಿವೆ. ಅಭಿವೃದ್ಧಿ ವಿರೋಧಿ ಸರ್ಕಾರವಿದು. ರಸ್ತೆ ಗುಂಡಿ ಮುಂಚಿಲ್ಲ. ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. ಅಡಕೆ, ತೆಂಗು ಬೆಳೆ ನಾಶವಾಗಿದೆ. ಮನೆಗಳೂ ನಾಶವಾಗಿದೆ. ಆದರೂ ಪರಿಹಾರ ವಿತರಿಸಿಲ್ಲ. ಸಂತ್ರಸ್ತರು ಶಾಪ ಹಾಕುತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ಸಿನ ದೊಡ್ಡ ಭ್ರಷ್ಟಾಚಾರ ದೊಡ್ಡಮಟ್ಟದಲ್ಲಿ ಮಾಡುತ್ತಿರುವ ಸರ್ಕಾರ ಇದು ಎಂದು ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ರು. ಭ್ರಷ್ಟಾಚಾರ ಎಸಗುವ ಮೂಲಕ ಕಾಂಗ್ರೆಸ್ ಸರ್ಕಾರವು ಮಹರ್ಷಿ ವಾಲ್ಮೀಕಿಯವರಿಗೆ ಅಪಮಾನ, ಅವಮಾನ ಮಾಡಿದೆ. ಬ್ರಹ್ಮಾಂಡ ಭ್ರಷ್ಟಾಚಾರವಾದರೂ ನಾಗೇಂದ್ರ ಹಾಗೂ ದದ್ದಲ್ ಮೇಲೆ ಎಫ್‌ಐಆರ್‌ ದಾಖಲಿಸಿಲ್ಲ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಸಣ್ಣಪುಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಜೈಲಿಗೆ ಕಳಿಸಿದ್ದಾರೆ. ನಾಚಿಕೆ ಆಗಲ್ವಾ ಇಂತಹವರಿಗೆ? ಮುಡಾ, ವಾಲ್ಮೀಕಿ ಹಗರಣದಿಂದ ರಾಜ್ಯದ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದರು ಆರೋಪಿಸಿದರು.

- - - ಬಾಕ್ಸ್‌-1 * ₹100 ಕೋಟಿ ಆಫರ್‌ ದಾಖಲೆಗಳ ಬಿಡುಗಡೆಗೊಳಿಸಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡಿದ್ದು, ಕಾಂಗ್ರೆಸ್ಸಿನ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಮನೆ ಮನೆಗೆ ವಿಷಯ ತಲುಪಿದೆ. ಜನರ ಗಮನ ಬೇರೆಡೆ ಸೆಳೆಯಲು, ವಿಷಯಾಂತರ ಮಾಡಲು ಗಣಿಗ ರವಿ ಸೇರಿದಂತೆ ಸಚಿವರಿಗೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಲು ಕಾಂಗ್ರೆಸ್ ವರಿಷ್ಠರು ಸೂಚಿಸಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಶಾಸಕರಿಗೆ ₹100 ಕೋಟಿ ಆಫರ್ ಮಾಡಿದೆಯೆಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ರವಿ ಗಣಿಗ ಯಾವ ಸಂದರ್ಭ, ಯಾವ ದಿನಾಂಕದಂದು, ಯಾರು ಆಫರ್ ಮಾಡಿದ್ದರು ಎಂಬುದೂ ಸೇರಿದಂತೆ ಆಡಿಯೋ ಮತಿತ್ತರ ದಾಖಲೆ ಬಿಡುಗಡೆ ಮಾಡಬೇಕು. ಲೋಕಸಭಾ ಚುನಾವಣೆ ಮುನ್ನ ₹50 ಕೋಟಿ ಅಂದ್ರು. ಈಗ ₹100 ಕೋಟಿ ಆಫರ್ ಮಾಡಲಾಗುತ್ತಿದೆ ಎನ್ನುವವರು ಯಾಕೆ ಇಡಿ, ಐಟಿಗೆ ದೂರು ಕೊಡಲಿಲ್ಲ. ವಿಷಯಾಂತರ ಮಾಡಲು ನಾಟಕವಾಡುತ್ತಿದ್ದಾರೆ. ಈ ರೀತಿಯ ನಾಟಕ ಮಾಡುವುದ ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಲಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದರು.

- - -

ಕೋಟ್‌ * ತಾಕತ್ತಿದ್ದರೆ ಇಡಿ, ಐಟಿಗೆ ದೂರು ನೀಡ್ಲಿ

ನಿಜವಾಗಿಯೂ ಸಿದ್ದರಾಮಯ್ಯ ಮತ್ತು ರವಿ ಗಣಿಗ ಅವರಿಗೆ ತಾಕತ್ತಿದ್ದರೆ ₹100 ಕೋಟಿ ಆಫರ್ ಬಗ್ಗೆ ಇಡಿ, ಐಟಿಗೆ ದೂರು ಕೊಡಲಿ. ಅದನ್ನು ಬಿಟ್ಟು ಅರಿವೆ ಹಾವು ಬಿಡುತ್ತಾರೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇಂತಹ ಕೆಟ್ಟ ಸರ್ಕಾರವನ್ನು ನಾವು ಹಿಂದೆಂದೂ ನೋಡಿಯೇ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ರಾಜ್ಯದ ಜನತೆ ಹಿಡಿಶಾಪ ಹಾಕುತ್ತಿದ್ದಾರೆ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - - -ಪೋಟೋ: ರೇಣುಕಾಚಾರ್ಯ