ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಆರೋಪ ಮಾಡುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಸನ ಜಿಲ್ಲೆಯ ಬಗೆಗಿನ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದಂತಿದೆ. ಈ ಬಾರಿಯ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಒಂದೆರೆಡು ಅನುದಾನ ಬಿಟ್ಟರೆ ಮತ್ತೇನೂ ಸಿಗದಿರುವುದು ಈ ಆರೋಪವನ್ನು ಮತ್ತಷ್ಟು ದೃಢಪಡಿಸುತ್ತಿದೆ.ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ, ಹೇಮಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ವಿಮಾನ ನಿಲ್ದಾಣ ಮತ್ತು ಅದಕ್ಕಾಗಿ ಭೂಮಿ ಕಳೆದುಕೊಂಡವರ ಸಮಸ್ಯೆ, ಹಾಸನ ನಗರದ ಮೇಲ್ಸೇತುವೆ ಕಾಮಗಾರಿ...ಹೀಗೆ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಆದರೆ, ಸರ್ಕಾರ ಇದ್ಯಾವುದನ್ನೂ ಪರಿಗಣಿಸಿದಂತಿಲ್ಲ. ಹಾಸನ ನಗರ ಪಾಲಿಕೆಗೆ 200 ಕೋಟಿ ರು. ಅನುದಾನ ಸೇರಿದಂತೆ ಹಾಸನ ತಾಲೂಕಿನ ಸಾಲಗಾಮೆ ಹಾಗೂ ಅರಕಲಗೂಡು ತಾಲೂಕಿನಲ್ಲಿ ತಲಾ ಒಂದೊಂದು ಚೆಕ್‌ಡ್ಯಾಂ ನಿರ್ಮಾಣದ ಘೋಷಣೆ ಬಿಟ್ಟರೆ ಮತ್ತೇನೂ ಇಲ್ಲ. ಮಲೆನಾಡು ಹಾಗೂ ಅರೆಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ ಎಷ್ಟು ಗಂಭೀರವಾಗಿದೆ ಎನ್ನುವುದನ್ನು ಸರ್ಕಾರ ಇನ್ನೂ ಅರ್ಥ ಮಾಡಿಕೊಂಡಂತಿಲ್ಲ. ಬಹುಶಃ ಅರ್ಥ ಮಾಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರಬಹುದು. ಅದರ ಪರಿಣಾಮ ಈ ಬಾರಿಯ ಬಜೆಟ್‌ನಲ್ಲಿ ಕಾಡಾನೆ ಸಮಸ್ಯೆ ಬಗೆಹರಿಸುವ ಯಾವುದೇ ಪ್ರಸ್ತಾಪ ಇಲ್ಲ.
ಜಿಲ್ಲೆಗೆ ಇನ್ನಷ್ಟು ಅನುದಾನದ ಅಗತ್ಯವಿದೆ:ಈ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಹಾಸನ ಮಹಾನಗರ ಪಾಲಿಕೆಗೆ ೨೦೦ ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ. ಆದರೆ ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡಬಹುದಿತ್ತು ಎಂದು ಹಾಸನ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷರು, ಎಫ್‌ಕೆಸಿಸಿಐ ನಿರ್ದೇಶಕರು ಹಾಗೂ ಐಟಿ ಸಮಿತಿಯ ಅಧ್ಯಕ್ಷರಾದ ಎಚ್.ಎ. ಕಿರಣ್ ಅಭಿಪ್ರಾಯಪಟ್ಟಿದ್ದಾರೆ.ರಾಜ್ಯ ಬಜೆಟ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂಲಸೌಕರ್ಯ ಅಭಿವೃದ್ಧಿಗಾಗಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಮಟ್ಟದಲ್ಲಿ ೮,೬೦೦ ಕೋಟಿ ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ. ಈ ಅನುದಾನದಲ್ಲಿ ಹಾಸನ ಜಿಲ್ಲೆಗೆ ಹೆಚ್ಚಿನ ಪಾಲು ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಕೆರೆಗಳಿಗೆ ನೀರು ತುಂಬಿಸುವ ಲಿಫ್ಟ್ ಇರಿಗೇಷನ್ ಯೋಜನೆಗಳಿಗೆ ಸರ್ಕಾರ ಒತ್ತು ನೀಡಿರುವುದು ಪ್ರಶಂಸನೀಯ. ಹಾಸನ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿರುವುದು ರೈತರಿಗೆ ಬಹಳ ನೆರವಾಗಲಿದೆ ಎಂದು ಹೇಳಿದರು.