1999ರಲ್ಲಿ ಮತ್ತೆ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌

| Published : Apr 13 2024, 01:05 AM IST

ಸಾರಾಂಶ

ಬಾಗಲಕೋಟೆ: 1999ರಲ್ಲಿ ನಡೆದ ಬಾಗಲಕೋಟೆ ಕ್ಷೇತ್ರದ ಲೋಕಸಭೆ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಮಹತ್ವದ್ದಾಗಿತ್ತು. ಸತತ ಎರಡು ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದ್ದ ಕೈ ನಾಯಕರಿಗೆ ಈ ಚುನಾವಣೆ ರಾಜಕೀಯ ಪುನರ್ಜನ್ಮ ನೀಡಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ಎಸ್.ಪಾಟೀಲ ಗೆದ್ದು ಸಂಸತ್ ಪ್ರವೇಶಿಸಿದರು.

ಈಶ್ವರ ಶೆಟ್ಟರ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

1999ರಲ್ಲಿ ನಡೆದ ಬಾಗಲಕೋಟೆ ಕ್ಷೇತ್ರದ ಲೋಕಸಭೆ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಮಹತ್ವದ್ದಾಗಿತ್ತು. ಸತತ ಎರಡು ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದ್ದ ಕೈ ನಾಯಕರಿಗೆ ಈ ಚುನಾವಣೆ ರಾಜಕೀಯ ಪುನರ್ಜನ್ಮ ನೀಡಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ಎಸ್.ಪಾಟೀಲ ಗೆದ್ದು ಸಂಸತ್ ಪ್ರವೇಶಿಸಿದರು.

ದಶಕದ ನಂತರ 1999ರಲ್ಲಿ ರಾಜ್ಯ ವಿಧಾನಸಭೆಗೆ ಮತ್ತು ಲೋಕಸಭೆಗೆ ಮತ್ತೊಮ್ಮೆ ಒಟ್ಟಿಗೆ ಚುನಾವಣೆ ನಡೆಯಿತು. ಅಂದು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣಾ ನೇತೃತ್ವದಲ್ಲಿ ಪಕ್ಷ ಚುನಾವಣೆ ಎದುರಿಸಿತು. 1994ರ ಚುನಾವಣೆ ನಂತರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜನತಾದಳ ಇಬ್ಬಾಗವಾಗಿ ನಾಯಕರ ನಡುವಿನ ಕಚ್ಚಾಟದಿಂದ ಜನ ಬೇಸತ್ತಿದ್ದರು. ಹೀಗಾಗಿ 1999ರಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭೆ ಹೊರತುಪಡಿಸಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿತ್ತು. ಈ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್, ಜೆಡಿಯು, ಜನತಾದಳದ ಸ್ಪರ್ಧೆಯಿಂದ ತ್ರೀಕೋನ ಸ್ಪರ್ಧೆಯಾಗಿ ಕಂಡಿದ್ದರೂ, ಕಾಂಗ್ರೆಸ್ ಮತ್ತು ಜೆಡಿಯು ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ರೋಣದ ಪಾಟೀಲರಿಗೆ ಟಿಕೆಟ್:1999ರ ಬಾಗಲಕೋಟೆಯ ಲೋಕಸಭೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಘಟಾನುಘಟಿ ನಾಯಕರು ಬೆಂಗಳೂರು, ದೆಹಲಿಯತ್ತ ಸಾಕಷ್ಟು ಅಲೆದಾಡಿದ್ದರು. 1996 ಮತ್ತು 1998ರ ಚುನಾವಣೆಯಲ್ಲಿ ಸೋಲು ಕಂಡಿದ್ದ ಸಿದ್ದು ನ್ಯಾಮಗೌಡ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದರು. ಆದರೆ, ಅವರ ಪ್ರಯತ್ನಕ್ಕೆ ಜಿಲ್ಲೆಯಲ್ಲಿಯೇ ಅಪಸ್ವರ ಹೆಚ್ಚಾಗಿದ್ದರಿಂದ ಟಿಕೆಟ್ ತರಲು ಸಾಧ್ಯವಾಗಿರಲಿಲ್ಲ. ಇದೇ ಲೋಕಸಭಾ ವ್ಯಾಪ್ತಿಯ ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಕಟ್ಟಾ ಕಾಂಗ್ರೆಸ್ಸಿಗ ಆರ್.ಎಸ್.ಪಾಟೀಲ ಅವರು ಅಚ್ಚರಿಯಾಗಿ ಆಯ್ಕೆಯಾಗಿದ್ದರು. ಎಲ್ಲರನ್ನು ಹಿಂದಿಕ್ಕಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಮತ್ತೊಮ್ಮೆ ಕಾಂಗ್ರೆಸ್ ಗೆಲವಿಗೆ ಕಾರಣರಾದರು.

ಒಗ್ಗಟ್ಟಿಗೆ ಬಲ:

ಆರ್‌.ಎಸ್.ಪಾಟೀಲ ಆಯ್ಕೆಗೆ ಬಹುತೇಕ ಜಿಲ್ಲೆಯಲ್ಲಿರುವ ನಾಯಕರು ಅಪಸ್ವರ ಎತ್ತಲಿಲ್ಲ. ಕಾರಣ ಇವರು ಬಾಗಲಕೋಟೆ ಲೋಕಸಭೆಗೆ ಹೊಸಮುಖ ಜೊತೆಗೆ ಎಲ್ಲ ಸಮುದಾಯದ ಜೊತೆಗಿನ ಉತ್ತಮ ಸಂಬಂಧ ಹೊಂದಿದ್ದರು. ಆರ್ಥಿಕವಾಗಿಯೂ ಸಮರ್ಥರಾಗಿದ್ದ ಕಾರಣ ಬಾಗಲಕೋಟೆಯ ಕಾಂಗ್ರೆಸ್ ಕಾರ್ಯಕರ್ತರು ಅವರ ಗೆಲವಿಗೆ ಮತ್ತಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದರಿಂದ ಸಹಜವಾಗಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತು.

ಸರನಾಯಕ ಸೋಲು:

ಕಾಂಗ್ರೆಸ್‌ ಸಂಘಟಿತ ಪ್ರಯತ್ನದ ಮುಂದೆ ಹಾಲಿ ಸಂಸದರಾಗಿದ್ದ ಜೆಡಿಯುನ ಅಜಯಕುಮಾರ ಸರನಾಯಕ ಅವರು ಭಾರಿ ಅಂತರ ಸೋಲು ಕಂಡರು. ಜನತಾ ಪರಿವಾರದ ಬಹುತೇಕ ನಾಯಕರು ಸರನಾಯಕ ಜೊತೆ ನಿಂತು ಚುನಾವಣೆ ಎದುರಿಸಿದ್ದರೂ ಫಲ ನೀಡಲಿಲ್ಲ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಒಟ್ಟಿಗೆ ಬಂದಿದ್ದರಿಂದ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ಪ್ರಬಲವಾಗಿತ್ತು. ಜೊತೆಗೆ ಸ್ವಕ್ಷೇತ್ರವಾದ ರೋಣದಲ್ಲಿ ಸಿಕ್ಕ 30 ಸಾವಿರ ಮತ ಪಾಟೀಲರ ಗೆಲುವಿನ ದಾರಿ ಸುಲಭವಾಗಿಸಿತ್ತು.

ಅಂದು ನಡೆದ ಚುನಾವಣೆಯಲ್ಲಿ ಒಟ್ಟು 3 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಒಟ್ಟು 7,83,829 (ಶೇ.69,49) ಮತದಾನವಾಗಿತ್ತು, ಕಾಂಗ್ರೆಸ್‌ನ ಆರ್.ಎಸ್.ಪಾಟೀಲ 3,78,488 ಮತಗಳನ್ನು ಪಡೆದು ಜಯಭೇರಿಯಾಗಿದ್ದರು. ಅವರ ಪ್ರತಿಸ್ಪರ್ಧಿ ಜೆಡಿಯುನ ಅಜಯಕುಮಾರ ಸರನಾಯಕ 3,02,054 ಮತಗಳನ್ನು ಮಾತ್ರ ಪಡೆದರು. ಜೆಡಿಎಸ್‌ನ ಅಶೋಕ ಗಾಣಿಗೇರ 72,422 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಇಳಿದಿದ್ದರು. ಗೆಲವಿನ ಅಂತರ 76,434 ರಷ್ಟಿತ್ತು.