ತಿಂಗಳಾಂತ್ಯಕ್ಕೆ ಕೈ ಅಭ್ಯರ್ಥಿ ಫೈನಲ್: ಸಲೀಂ ಅಹ್ಮದ್‌

| Published : Feb 12 2024, 01:36 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಗೆ ದ.ಕ.ದಿಂದ ಐದು ಮಂದಿ‌ಯ ಹೆಸರು ಹೈಕಮಾಂಡ್‌ಗೆ ಹೋಗಿದೆ ಎಂದು ಹೇಳಿದ ಸಲೀಂ ಅಹ್ಮದ್‌, ಈ ಐವರ ಹೆಸರು ಹೇಳಲ್ಲ ಎಂದರು. ರಾಜ್ಯದಲ್ಲಿ ಅಭ್ಯರ್ಥಿಗಳ ಬರ ಕಾಂಗ್ರೆಸ್‌ಗೆ ಇಲ್ಲ. ಅನೇಕ ಕ್ಷೇತ್ರಗಳಲ್ಲಿ 20ಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜ್ಯದ ಎಲ್ಲ ಅಭ್ಯರ್ಥಿಗಳ ಪಟ್ಟಿ ಈ ತಿಂಗಳ ಕೊನೆ ವಾರದಲ್ಲಿ ನಿರ್ಧಾರವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್‌ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಲೋಕಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವೀಕ್ಷಕರು ಸಲ್ಲಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯಿಂದಾಗಿ ಅಭ್ಯರ್ಥಿಗಳ ಆಯ್ಕೆ ಕೊಂಚ ವಿಳಂಬ ಆಗಿದೆ. ಶೀಘ್ರದಲ್ಲೇ ಎಐಸಿಸಿಯಲ್ಲಿ ಚರ್ಚೆ ನಡೆದು ತಿಂಗಳಾಂತ್ಯದಲ್ಲಿ ಅಭ್ಯರ್ಥಿಗಳ ಫೈನಲ್‌ ಲಿಸ್ಟ್‌ ಹೊರಬೀಳಲಿದೆ. ಅಭ್ಯರ್ಥಿಗಳ ಆಯ್ಕೆಗೆ ಪೂರಕವಾಗಿ ಪಕ್ಷದ ಆಂತರಿಕ ಸರ್ವೇಗಳು ನಡೆಯುತ್ತಿವೆ ಎಂದು ಹೇಳಿದರು.ಕನಿಷ್ಠ 20 ಸೀಟ್‌ ಗೆಲ್ತೇವೆ: ಪಕ್ಷದ ಆಂತರಿಕ ಸರ್ವೇ ನಡೆಸಲಾಗಿದ್ದು, ಅದರ ಪ್ರಕಾರ ರಾಜ್ಯದಲ್ಲಿ ಕನಿಷ್ಠ 20 ಸೀಟ್‌ಗಳನ್ನು ಗೆಲ್ಲಲಿದ್ದೇವೆ. ಗ್ಯಾರಂಟಿ ಯೋಜನೆಗಳಿಂದಾಗಿ ಜನರು ಕಾಂಗ್ರೆಸ್‌ ಪರವಾಗಿದ್ದಾರೆ. ಬಿಜೆಪಿಯ ಸುಳ್ಳುಗಳು ಜನರಿಗೆ ಗೊತ್ತಾಗಿವೆ ಎಂದರು.ನಿರ್ಮಲಾ ರಾಜೀನಾಮೆ ನೀಡಲಿ: ಕೇಂದ್ರ ಸರ್ಕಾರ ಬೇಕೆಂದೇ ರಾಜ್ಯಕ್ಕೆ ಸರಿಯಾದ ಅನುದಾನ ನೀಡುತ್ತಿಲ್ಲ. 5 ವರ್ಷದಲ್ಲಿ ರಾಜ್ಯಕ್ಕೆ ನೀಡಬೇಕಿದ್ದ 50 ಸಾವಿರ ಕೋಟಿ ರು. ಕೊಟ್ಟಿಲ್ಲ. ಐವರು ಕೇಂದ್ರ ಸಚಿವರು, 25 ಬಿಜೆಪಿ ಎಂಪಿಗಳಿದ್ದರೂ ರಾಜ್ಯದ ಪಾಲು ತರಲು ಯಾಕೆ ಆಗಿಲ್ಲ? ರಾಜ್ಯದ 123 ತಾಲೂಕಲ್ಲಿ ಬರ ಇದೆ. ಅನುದಾನಕ್ಕಾಗಿ 17 ಬಾರಿ ಪತ್ರ ಬರೆದರೂ ಚಿಕ್ಕಾಸೂ ಕೊಡದೆ ಅನ್ಯಾಯ ಮಾಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮ್‌ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಲೀಂ ಅಹ್ಮದ್‌ ಆಗ್ರಹಿಸಿದರು.

ಜೆಡಿಎಸ್‌ ಅವಕಾಶವಾದಿ ಮೈತ್ರಿ:

ಜಾತ್ಯತೀತ ಎಂದು ಹೇಳಿಕೊಂಡು ಬಂದಿರುವ ಜೆಡಿಎಸ್‌ ಈಗ ಕೇವಲ ಅಧಿಕಾರಕ್ಕಾಗಿ ಬಿಜೆಪಿ ಜತೆ ಅವಕಾಶವಾದಿ ಮೈತ್ರಿ ಮಾಡಿಕೊಂಡಿದೆ. ಹಿಂದೆ ಕೋಮುವಾದಿಗಳ ಬಗ್ಗೆ ಮಾತನಾಡುತ್ತಿದ್ದ ದೇವೇಗೌಡರು ಈಗ ಬಿಜೆಪಿ ಗುಣಗಾನ ಮಾಡುತ್ತಿದ್ದಾರೆ. ಮಗನ ಭವಿಷ್ಯ ಬಗ್ಗೆ ಅವರಿಗೆ ಚಿಂತೆ. ಕಾಂಗ್ರೆಸ್‌ಗೆ ಜನರು ಅಧಿಕಾರ ನೀಡಿದ್ದರಿಂದ ಭ್ರಮನಿರಸರಾಗಿ ಬಿಜೆಪಿ ಜತೆ ಹೋಗಿದ್ದಾರೆ ಎಂದು ಟೀಕಿಸಿದರು.ಎಲ್ಲ 28 ಸೀಟ್‌ ಗೆಲ್ಲುವ ಕುರಿತ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಲೀಂ, 28 ಸೀಟ್ ಗೆಲ್ಲುವುದಾದರೆ ಜೆಡಿಎಸ್‌ ಜತೆ ಮೈತ್ರಿ ಏಕೆ ಮಾಡಬೇಕಿತ್ತು? ಅಮಿತ್‌ ಶಾ ರಾಜ್ಯಕ್ಕೆ ಬರುವ ಅಗತ್ಯವಿತ್ತಾ? ಮೋದಿ ಮೇಲೆ ಜನರಿಗೆ ನಿಜವಾಗಿಯೂ ವಿಶ್ವಾಸ ಇದ್ದಿದ್ದರೆ ಕೇವಲ ಬಿಜೆಪಿ ಮಾತ್ರವೇ ಏಕಾಂಗಿಯಾಗಿ ಏಕೆ ಸ್ಪರ್ಧೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ವಿರುದ್ಧ ಕ್ರಮ: ಕೆಂಪಣ್ಣ ಅವರು ಅಧಿಕಾರಿಗಳು ಹಣ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಂತಹ ನಿರ್ದಿಷ್ಟ ಪ್ರಕರಣ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಕಾಂಗ್ರೆಸ್‌ ಮುಖಂಡರಾದ ರಮಾನಾಥ ರೈ, ಹರೀಶ್‌ ಕುಮಾರ್‌, ವಿನಯ ಕುಮಾರ್ ಸೊರಕೆ, ಮಂಜುನಾಥ ಭಂಡಾರಿ, ಜೆ.ಆರ್. ಲೋಬೊ, ಐವನ್ ಡಿಸೋಜ, ಸುರೇಶ್‌ ಬಲ್ಲಾಳ್‌, ಮಿಥುನ್‌ ರೈ, ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಕೃಪಾ ಆಳ್ವ ಮತ್ತಿತರರಿದ್ದರು.ದ.ಕ.ದಿಂದ ಐವರ ಹೆಸರು: ಮುಂಬರುವ ಲೋಕಸಭಾ ಚುನಾವಣೆಗೆ ದ.ಕ.ದಿಂದ ಐದು ಮಂದಿ‌ಯ ಹೆಸರು ಹೈಕಮಾಂಡ್‌ಗೆ ಹೋಗಿದೆ ಎಂದು ಹೇಳಿದ ಸಲೀಂ ಅಹ್ಮದ್‌, ಈ ಐವರ ಹೆಸರು ಹೇಳಲ್ಲ ಎಂದರು. ರಾಜ್ಯದಲ್ಲಿ ಅಭ್ಯರ್ಥಿಗಳ ಬರ ಕಾಂಗ್ರೆಸ್‌ಗೆ ಇಲ್ಲ. ಅನೇಕ ಕ್ಷೇತ್ರಗಳಲ್ಲಿ 20ಕ್ಕೂ ಅಧಿಕ ಆಕಾಂಕ್ಷಿಗಳಿದ್ದಾರೆ. ಕನಿಷ್ಠ ನಾಲ್ಕೈದು ಆಕಾಂಕ್ಷಿಗಳಾದರೂ ಇದ್ದಾರೆ. ಬಿಜೆಪಿಯವರು ಆರೋಪ ಮಾಡುವುದಷ್ಟೆ ಎಂದರು.