ಕಾಂಗ್ರೆಸ್ ಅಭ್ಯರ್ಥಿಗೆ ರಾಜಕೀಯ ಜ್ಞಾನವಿಲ್ಲ, ಮೈತ್ರಿ ಅಭ್ಯರ್ಥಿ ಎಚ್ಡಿಕೆ ಗೆಲ್ಲಿಸಿ: ಕೆ.ಸಿ.ನಾರಾಯಣಗೌಡ

| Published : Apr 25 2024, 01:07 AM IST

ಕಾಂಗ್ರೆಸ್ ಅಭ್ಯರ್ಥಿಗೆ ರಾಜಕೀಯ ಜ್ಞಾನವಿಲ್ಲ, ಮೈತ್ರಿ ಅಭ್ಯರ್ಥಿ ಎಚ್ಡಿಕೆ ಗೆಲ್ಲಿಸಿ: ಕೆ.ಸಿ.ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ರಾಜಕೀಯ ನಾಯಕ ಬಿ.ಎಸ್.ಯಡಿಯೂರಪ್ಪ ವೀರಶೈವ ಸಮಾಜಕ್ಕೆ ಸೇರಿದವರು. ಕೊನೆ ಉಸಿರಿರುವವರೆಗೂ ಅವರಿಗೆ ಮೋಸ ಮಾಡುವುದಿಲ್ಲ. ಕ್ಷೇತ್ರದ ವೀರಶೈವ ಸಮಾಜದ ಜನರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ಹಾಕಿ ಗೆಲ್ಲಿಸಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜಕೀಯ ಜ್ಞಾನವಿಲ್ಲದ ಕಾಂಗ್ರೆಸ್ ಅಭ್ಯರ್ಥಿಯನ್ನು ತಿರಸ್ಕರಿಸಿ ಎರಡು ಬಾರಿ ಮುಖ್ಯಮಂತ್ರಿಗಳಾಗಿ ಉತ್ತಮ ಆಡಲಿತ ನಡೆಸಿರುವ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮನವಿ ಮಾಡಿದರು.

ಪಟ್ಟಣದ ಎಸ್.ಕೆ.ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿಗೆ ಬೆಂಬಲ ಸೂಚಿಸಲು ಆಯೋಜಿಸಿದ್ದ ವೀರಶೈವ-ಲಿಂಗಾಯತ ಸಮುದಾಯ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಕೇವಲ ಗುತ್ತಿಗೆದಾರ. ಯಾವುದೇ ರಾಜಕೀಯ ಜ್ಞಾನವಿಲ್ಲ. ಕುಮಾರಣ್ಣ ಅವರಿಗೆ ರಾಜಕೀಯ ಜ್ಞಾನ ಮತ್ತು ಅನುಭವ ಇದೆ. ಇವರು ಚುನಾಯಿತರಾದರೆ ಕೆಂದ್ರದಲ್ಲಿ ಪ್ರಭಾವಿ ಸಚಿವರಾಗುತ್ತಾರೆ. ಇದರ ಲಾಭ ಸಮಸ್ತ ಕರ್ನಾಟಕದ ಜನರಿಗೆ ಸಿಗಲಿದೆ ಎಂದರು.

ನನ್ನ ರಾಜಕೀಯ ನಾಯಕ ಬಿ.ಎಸ್.ಯಡಿಯೂರಪ್ಪ ವೀರಶೈವ ಸಮಾಜಕ್ಕೆ ಸೇರಿದವರು. ಕೊನೆ ಉಸಿರಿರುವವರೆಗೂ ಅವರಿಗೆ ಮೋಸ ಮಾಡುವುದಿಲ್ಲ. ಕ್ಷೇತ್ರದ ವೀರಶೈವ ಸಮಾಜದ ಜನರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು.

ಸಿಎಂ ಅನುದಾನ ತಾರತಮ್ಯ ಹೇಳಿಕೆ ಸರಿಯಲ್ಲ:

ಶಾಸಕ ಎಚ್ .ಟಿ.ಮಂಜು ಮಾತನಾಡಿ, ಜಿಲ್ಲೆಯ ವೀರಶೈವ ಸಮಾಜದ ಮುಖಂಡರು ಯಾವುದೇ ಅಪಪ್ರಚಾರಗಳಿಗೆ ಕಿವಿಗೂಡದೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಣ್ಣನನ್ನು ಅತಿ ಹೆಚ್ಚು ಮತ ನೀಡಿ ಗೆಲ್ಲಿಸಿಕೊಡುವ ಮೂಲಕ ಬಿ.ಎಸ್.ವೈ ಮತ್ತು ಬಿ.ವೈ.ವಿಜಯೇಂದ್ರ ಅವರಿಗೆ ಗೌರವ ತಂದುಕೊಡುವಂತೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ಏಕೈಕ ಜೆಡಿಎಸ್ ಶಾಸಕನಾಗಿದ್ದೇನೆ. ಜೆಡಿಎಸ್ ಶಾಸಕನ ಕ್ಷೇತ್ರಕ್ಕೆ ಅನುದಾನ ನೀಡುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕೆ.ಆರ್.ಪೇಟೆ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಇದು ಮುಖ್ಯಮಂತ್ರಿಗಳ ಘನತೆಗೆ ತಕ್ಕದಾದ ಹೇಳಿಕೆಯಲ್ಲ ಎಂದು ಖಂಡಿಸಿದರು.

ಮುಖ್ಯಮಂತ್ರಿಗಳಾಗಿ ರಾಜ್ಯದ ಸಮಸ್ತ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು ಶಾಸಕರ ನಡುವೆ ತಾರತಮ್ಯ ಧೋರಣೆ ಹೊಂದಿರಬಾರದು. ನೀವು ತಾರತಮ್ಯ ಮಾಡುವುದಾದರೆ ಕೇಂದ್ರದ ಬಿಜೆಪಿ ಸರ್ಕಾರ ಅನುದಾನ ನೀಡಿಕೆಯಲ್ಲಿ ತಾರತಮ್ಯ ತೋರಿಸುತ್ತಿದೆ ಎಂದು ಟೀಕಿಸುವ ನೈತಿಕತೆ ಇಲ್ಲ ಟೀಕಿಸಿದರು.

ತಾಲೂಕು ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯ ಮಾತನಾಡಿ, ವೀರಶೈವ ಸಮಾಜವನ್ನು ಜಾತಿ ಒಳಜಾತಿಗಳ ಹೆಸರಿನಲ್ಲಿ ವಿಭಜಿಸಲು ಹೊರಟಿದ್ದವರು ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸಮುದಾಯದ ಜನ ತಕ್ಕ ಉತ್ತರ ನೀಡಬೇಕು ಎಂದು ಕೋರಿದರು.

ಸಮಾರಂಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗರಾಜು, ಮೈಸೂರು ಡೈರಿ ನಿರ್ದೇಶಕ ಎಸ್.ಸಿ.ಅಶೋಕ್, ಮನ್ಮುಲ್ ನಿರ್ದೇಶಕ ಡಾಲು ರವಿ, ಜಿಪಂ ಮಾಜಿ ಉಪಾಧ್ಯಕ್ಷ ಬ್ಯಾಲದಕೆರೆ ಪಾಪೇಗೌಡ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ವೀರಶೈವ ಸಮಾಜದ ಮುಖಂಡರಾದ ತೋಂಟಪ್ಪಶೆಟ್ಟಿ, ಮೆಳ್ಳಳ್ಳಿ ಗಂಗಾಧರ್, ವೀರಶೈವ ಮಹಾಸಭಾದ ತಾಲೂಕು ಕಾರ್ಯದರ್ಶಿ ಈರಪ್ಪ ಸೇರಿದಂತೆ ಹಲವರು ಇದ್ದರು.

ವೈಯಕ್ತಿಕ ಕಾರಣಕ್ಕೆ ಕುಟುಂಬಗಳ ನಡುವೆ ಜಗಳ

ಕೆ.ಆರ್.ಪೇಟೆ:ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಜೆಡಿಎಸ್ ಇಬ್ಬರು ಕಾರ್ಯಕರ್ತರ ಕುಟುಂಬಗಳ ನಡುವೆ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ನಡೆದಿದೆ ಎಂದು ಶಾಸಕ ಎಚ್ .ಟಿ.ಮಂಜು ಸ್ಪಷ್ಟನೆ ನೀಡಿದರು. ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಕುಟುಂಬಗಳ ವೈಯಕ್ತಿಕ ಗಲಾಟೆಯನ್ನು ಕಾಂಗ್ರೆಸ್ ಮುಖಂಡರು ಕೈ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರ ಹಲ್ಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ಜೆಡಿಎಸ್ ಪಕ್ಷದ ಎರಡು ಕುಟುಂಬಗಳ ನಡುವಿನ ವೈಯಕ್ತಿಕ ಗಲಾಟೆ ಎನ್ನುವುದನ್ನು ಪೋಲಿಸರು ದೃಢ ಪಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಕಾಂಗ್ರೆಸ್ಸಿಗರ ಮನಸ್ಥಿತಿಗೆ ನನ್ನ ಧಿಕ್ಕಾರ ಎಂದು ಘೋಷಣೆ ಕೂಗಿದರು.