ಮತದಾರರು ನಮ್ಮ ಪರವಾಗಿದ್ದು, ಶೇ.100 ಗೆಲುವಿನ ವಿಶ್ವಾಸ ಇದೆ

| Published : Apr 29 2024, 01:37 AM IST

ಮತದಾರರು ನಮ್ಮ ಪರವಾಗಿದ್ದು, ಶೇ.100 ಗೆಲುವಿನ ವಿಶ್ವಾಸ ಇದೆ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಅಷ್ಟೇ ಅಲ್ಲದೆ ಜಾತಿ, ಭೇದ ಮರೆತು ಜನ ಅಭಿವೃದ್ಧಿಯ ಮುಖ ನೋಡಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂಬ ವಿಶ್ವಾಸವಿದೆ. ಚುನಾವಣೆಗಾಗಿ ಬಿಜೆಪಿ ಬಹಳಷ್ಟು ಕಸರತ್ತು ನಡೆಸಿತು.

- ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣಫೋಟೋ- 27ಎಂವೈಎಸ್10

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿದರು.

----

ಕನ್ನಡಪ್ರಭ ವಾರ್ತೆ ಮೈಸೂರು

ಮತದಾರರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ ಎಂಬ ವಿಶ್ವಾಸ ಇದೆ. ಈ ಬಾರಿ ಶೇ.100 ಗೆಲುವಿನ ವಿಶ್ವಾಸ ಇದೆ ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಜಾತಿ, ಧರ್ಮವನ್ನು ಟೀಕಿಸದೆ ಅಭಿವೃದ್ಧಿಯನ್ನು ಮುಂದಿರಿಸಿ ಚುನಾವಣೆ ಎದುರಿಸಿದ್ದು, ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಿರುವುದು ನಮಗೆ ಪೂರಕ ವಾತಾವರಣ ಸೃಷ್ಟಿಸಿದೆ ಎಂದರು.

ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಅಷ್ಟೇ ಅಲ್ಲದೆ ಜಾತಿ, ಭೇದ ಮರೆತು ಜನ ಅಭಿವೃದ್ಧಿಯ ಮುಖ ನೋಡಿದ್ದು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆಂಬ ವಿಶ್ವಾಸವಿದೆ. ಚುನಾವಣೆಗಾಗಿ ಬಿಜೆಪಿ ಬಹಳಷ್ಟು ಕಸರತ್ತು ನಡೆಸಿತು. ಮಹಾರಾಜರ ನೆಪದಲ್ಲಿ ಜನರನ್ನು ಸೆಳೆಯುವ ಕುತಂತ್ರ ನಡೆಸಿದರು. ಮೈಸೂರಿನ ಚುನಾವಣಾ ಪ್ರಚಾರ ಸಭೆಗೆ ಬಂದಿದ್ದ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಬೈಯುವದರಲ್ಲೇ ತಮ್ಮ ಭಾಷಣದ ಹೆಚ್ಚಿನ ಸಮಯವನ್ನು ಕಳೆದರು ಎಂದು ಅವರು ಕಿಡಿಕಾರಿದರು.

ನನ್ನ ಜಾತಿಯ ಬಗ್ಗೆ ಪ್ರಶ್ನಿಸಿ ಪ್ರತಾಪ ಸಿಂಹ ನನ್ನನ್ನು ಬೈದರು. ಆಗಲೂ ಅಭಿವೃದ್ಧಿ ಕುರಿತು ಮಾತನಾಡಿಲ್ಲ. ಚುನಾವಣೆಗೆ ಎರಡು ದಿನವಿರುವಾಗ ಕ್ಷೇತ್ರದಲ್ಲಿ ಕಾಣದಾಗಿದ್ದಾರೆ. ಸಾಮಾನ್ಯನಾಗಿದ್ದ ನನಗೆ ಪಕ್ಷ ಟಿಕೆಟ್ ನೀಡಿದೆ. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮುಖ್ಯಮಂತ್ರಿಗಳನ್ನು ಸಾಯುವವರೆಗೂ ಮರೆಯಲು ಸಾಧ್ಯವಿಲ್ಲ. ಮುಂದೆ ಅವರು ಹೇಳಿದ್ದನ್ನು ಪಾಲಿಸಿಕೊಂಡಿರುತ್ತೇನೆ ಎಂದು ಅವರು ಹೇಳಿದರು.

ನನ್ನ ಬೆಂಬಲಿಸಿದ ಪಕ್ಷದ ಮುಖಂಡರು, ತೆರೆಮರೆಯಲ್ಲಿ ದುಡಿದ ಕಾರ್ಯಕರ್ತರನ್ನು ಸ್ಮರಿಸುತ್ತೇನೆ. ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಸಿಬ್ಬಂದಿ, ಭದ್ರತೆ ಒದಗಿಸಿದ ಪೊಲೀಸರಿಗೂ ಧನ್ಯವಾದವನ್ನು ಅವರು ತಿಳಿಸಿದರು.

ಎರಡು ಕಡೆ ಕಚೇರಿ

ಸಂಸದನಾಗಿ ಆಯ್ಕೆಯಾದ ಬಳಿಕ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕ ಕಚೇರಿ ತೆರೆಯುತ್ತೇನೆ. ಸ್ಥಳೀಯ ಶಾಸಕರೊಂದಿಗೆ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡಲು ಬದ್ಧನಾಗಿದ್ದೇನೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದ್ದು, ಕರ್ನಾಟಕಕ್ಕೆ ದೊರಕಬೇಕಾದ ತೆರಿಗೆ ಹಣವನ್ನು ತೆಗೆದುಕೊಂಡು ಬರುತ್ತೇವೆ ಎಂದರು.

ಚುನಾವಣೆಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಮುಗಿಸಿಕೊಳ್ಳುತ್ತಿದ್ದೇನೆ. ಕುಟುಂಬದೊಂದಿಗೆ ಮೂರು ದಿನ ಪ್ರವಾಸಕ್ಕೆ ತೆರಳಿ, ವಿಶ್ರಾಂತಿ ಪಡೆಯಲಿದ್ದು, ನಂತರ ಮೇ 7 ರಂದು ನಡೆಯುವ ಎರಡನೇ ಹಂತದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಲು ತಂಡದೊಂದಿಗೆ ತೆರಳಲಿದ್ದೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಎನ್.ಆರ್. ನಾಗೇಶ್, ಕೆ. ಮಹೇಶ್, ಗಿರೀಶ್ ಇದ್ದರು.

-- ಬಾಕ್ಸ್...

ಗೆದ್ದ ಮೇಲೆ ಪ್ರತಾಪ್ ಸಿಂಹ ಭೇಟಿ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರತಾಪ್ ಸಿಂಹ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತೇನೆ. ಸುಳ್ಳನ್ನು ಹೇಗೆ ಸತ್ಯದ ತಲೆ ಮೇಲೆ ಹೊಡೆದಂತೆ ಮಾತನಾಡಬೇಕು ಎಂಬುದನ್ನು ಅವರಿಂದಲ್ಲೇ ಕಲಿಯಬೇಕಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ವ್ಯಂಗ್ಯವಾಡಿದರು.

ನಾನು ಗೆದ್ದ ಮೇಲೆ ಪ್ರತಾಪ್ ಸಿಂಹ ಮನೆಗೆ ಹೋಗ್ತೀನಿ. ಹಾರ ಹಾಕಿ ಸುಳ್ಳು ಹೇಳೋದು ಹೇಗೆ ಅಂತಾ ಸಲಹೆ ಕೇಳ್ತೀನಿ. ಪ್ರತಾಪ್ ಸಿಂಹ ಎಲ್ಲಿಯೂ ಕಾಣ್ತಾ ಇಲ್ಲ. ಚುನಾವಣೆ ಸಂದರ್ಭದಲ್ಲಿ ಒಮ್ಮೆ ಬೆಂಗಳೂರಲ್ಲಿ ಪ್ರತಾಪ್ ಸಿಂಹ ನಾನು ಭೇಟಿಯಾಗಿದ್ದೇವು. ಇಬ್ಬರೂ ಕಾಫಿ ಕುಡಿದಿದ್ದೇವು. ಏಕೆ ನಿಮಗೆ ಟಿಕೆಟ್ ಮಿಸ್ ಆಯ್ತು ಅಂತಾ ನಾನೇ ಕೇಳ್ದೆ. ಅವರು ಆಮೇಲೆ ಹೇಳ್ತೀನಿ ಬಿಡಿ ಅಂತಾ ಹೇಳಿದರು ಎಂದರು.