ಬಳ್ಳಾರಿಗಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಚಿವ ನಾಗೇಂದ್ರ

| Published : Apr 30 2024, 02:03 AM IST

ಬಳ್ಳಾರಿಗಾಗಿ ಸಂಸತ್‌ನಲ್ಲಿ ಧ್ವನಿ ಎತ್ತಲು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಚಿವ ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಬಡವರ ಪರವಾಗಿಲ್ಲ. ಕಾಂಗ್ರೆಸ್ ಎಲ್ಲ ಸಮಾಜದ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ.

ಬಳ್ಳಾರಿ: ಸಂಸತ್ತಿನಲ್ಲಿ ಬಳ್ಳಾರಿ ಪರ ಧ್ವನಿ ಎತ್ತಲು ಈ.ತುಕಾರಾಂ ಅವರನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಮತದಾರರಲ್ಲಿ ಮನವಿ ಮಾಡಿದರು.ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ತುಕಾರಾಂ ಅವರನ್ನು ಚುನಾಯಿಸಿದರೆ, ಬಳ್ಳಾರಿ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.

ಬಿಜೆಪಿ ಬಡವರ ಪರವಾಗಿಲ್ಲ. ಕಾಂಗ್ರೆಸ್ ಎಲ್ಲ ಸಮಾಜದ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಬಡವರಿಗೆ ಸಹಕಾರಿಯಾಗಿದೆ. ದುಡಿವ ಜನರ ಹಿತ ಕಾಯುವುದು ಕಾಂಗ್ರೆಸ್‌ನ ಮೊದಲ ಆದ್ಯತೆಯಾಗಿದೆ. ಕಾಂಗ್ರೆಸ್ ಸರ್ಕಾರ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ವಲಯಗಳ ಸುಧಾರಣೆಗೆ ಶ್ರಮಿಸುತ್ತಿದೆ. ಬಡವರ ಕಲ್ಯಾಣಕ್ಕೆಂದೇ ಹತ್ತಾರು ಕಾರ್ಯಕ್ರಮ ಜಾರಿಗೊಳಿಸುತ್ತಿದೆ. ಆದರೆ, ಬಿಜೆಪಿ ಶ್ರೀಮಂತರ ಹಿತ ಕಾಯಲಷ್ಟೇ ಸೀಮಿತವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನೇಕ ಪ್ರಗತಿದಾಯಿಕ ಕಾರ್ಯಕ್ರಮಗಳ ಕುರಿತು ಜನರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಸಚಿವ ಬಿ.ನಾಗೇಂದ್ರ ಗ್ರಾಮೀಣ ಪ್ರದೇಶದಲ್ಲಿ ಮತಪ್ರಚಾರಕ್ಕೆ ತೆರಳುತ್ತಿದ್ದಂತೆಯೇ ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪುಷ್ಪಾರ್ಪಣೆ ಮಾಡಿ ಸ್ವಾಗತ ಮಾಡಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದವು.

ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ, ಬಡವರ ಪರ ಕಾಂಗ್ರೆಸ್ ಸರ್ಕಾರಕ್ಕೆ ಜಯವಾಗಲಿ ಎಂಬ ಘೋಷಣೆಗಳು ಕೇಳಿ ಬಂದವು. ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಜಿಲ್ಲಾ ಮುಖಂಡರಾದ ವೆಂಕಟೇಶ್ ಪ್ರಸಾದ್, ಗಾದಿಲಿಂಗನಗೌಡ, ಭೀಮನಗೌಡ, ಸಂಗಾಲಿ ಈರಣ್ಣ, ಮೂಲೆಮನೆ ಗಾದಿಲಿಂಗಪ್ಪ, ರಾಘವೇಂದ್ರ, ದೊಡ್ಡಗಾದಿಲಿಂಗಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಚ್.ತಿಮ್ಮನಗೌಡ, ಅಣ್ಣಾನಾಗರಾಜ್, ಮೋಕಾ ಮುದಿಮಲ್ಲಯ್ಯ, ಗೋವರ್ಧನರೆಡ್ಡಿ ಮತ್ತಿತರರು ಜಿಲ್ಲಾ ಸಚಿವರ ಜೊತೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಧುವಾಳ, ಹಳೆ ಎರ್ರಗುಡಿ, ಹೊಸ ಎರ್ರಗುಡಿ, ಬೆಣಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು.