ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ: ಸಂಗಣ್ಣ ಕರಡಿ

| Published : May 02 2024, 12:22 AM IST

ಸಾರಾಂಶ

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯಿಂದ ಯಾರೇ ಬಂದು ಪ್ರಚಾರ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಗೆಲುವು ನಿಶ್ಚಿತ.

- ವಿವಿಧ ಗ್ರಾಮದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯಿಂದ ಯಾರೇ ಬಂದು ಪ್ರಚಾರ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಗೆಲುವು ನಿಶ್ಚಿತ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ಬುಧವಾರ ತಮ್ಮ ನಿವಾಸದಲ್ಲಿ ಹಮ್ಮಿಕೊಂಡ ವಿವಿಧ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲೋಕಸಭಾ ಕ್ಷೇತ್ರದ ಎಂಟು‌ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಯಾರು ಎಂಬುದೇ ಗೊತ್ತಿಲ್ಲ. ಯಾರೇ ಬಂದು ಪ್ರಚಾರ ಮಾಡಿದರು ಕಾಂಗ್ರೆಸ್ ಗೆಲುವು ತಡೆಯಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಮತ್ತು ಐದು ಗ್ಯಾರಂಟಿಗಳು ಜನರ ಮನಸ್ಸಿನಲ್ಲಿದ್ದು, ನಮ್ಮ ಅಭ್ಯರ್ಥಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತದಾರರ ಒಲವಿದೆ. ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಜನಪರ ಕಾರ್ಯಕ್ರಮಗಳೇ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ. ಬಿಜೆಪಿಗರ ಹಸಿ ಸುಳ್ಳು, ಆಶ್ವಾಸನೆಗೆ ಮತದಾರರು ಕಿವಿಗೊಡಬೇಡಿ. ಕಳೆದ ಹತ್ತು ವರ್ಷಗಳಿಂದ ಸುಳ್ಳನ್ನೇ ಹೇಳುತ್ತಿರುವ ಬಿಜೆಪಿಗರಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಕಾಂಗ್ರೆಸ್ ಮುಖಂಡ ಅಮರೇಶ ಕರಡಿ, ಕೃಷ್ಣರೆಡ್ಡಿ ಗಲ್ಬಿ, ಜಿಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ, ತೋಟಪ್ಪ ಕಾಮನೂರು, ಅನ್ವರ್ ಗಡಾದ, ರವಿ ದೇವರಮನಿ, ಧರ್ಮರಾಜ್ ದೇವರಮನಿ, ಬಸವರಾಜ ಭೋವಿ ಸೇರಿದಂತೆ ಇತರರಿದ್ದರು.

ತಾಲೂಕಿನ ಹ್ಯಾಟಿ ಗ್ರಾಮದ ಹನುಮಗೌಡ ಪೊಲೀಸ್ ಪಾಟೀಲ್, ದೇವೇಂದ್ರಗೌಡ, ಪ್ರವೀಣ್ ಗೊಂಡಬಾಳ, ಬಸವರಾಜ ವಾಳದ, ಹೊನ್ನಪ್ಪ ಬಾರಕೇರ, ಪ್ರಕಾಶ ಐನಗೌಡರ್ ಸೇರಿದಂತೆ ಹಿರೇಬಗನಾಳ, ಮೆಳ್ಳಿಕೇರಿ, ಕವಲೂರು ಮತ್ತು ಅಳವಂಡಿ ಗ್ರಾಮದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಜನಪರ ಕಾರ್ಯಕ್ರಮ ಮೆಚ್ಚಿ ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.