ಸಾರಾಂಶ
- ರಾಹುಲ್‌ಗೆ ಕೋರ್ಟ್ ಮೆಟ್ಟಿಲೇರಿಸಿದ್ದಕ್ಕೆ ಕಾಂಗ್ರೆಸ್ ಸೇಡಿನ ರಾಜಕಾರಣ । ಮಮತಾ ಆರೋಪಿಸಿದಂತೆ ಎಲ್ಲರ ಬಂಧಿಸಲು ಸವಾಲು
- - - ಕನ್ನಡಪ್ರಭ ವಾರ್ತೆ, ದಾವಣಗೆರೆಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲುಂಡಿದೆ. ಬಿಜೆಪಿ ವಿರುದ್ಧದ ಅಪಪ್ರಚಾರ ಮಾಡಿದ್ದ ಹಿನ್ನೆಲೆ ಧೀಮಂತ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಹುಲ್ ಗಾಂಧಿಗೆ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದರ. ಇದರ ವಿರುದ್ಧ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣಕ್ಕೆ ಶುರುಮಾಡಿದೆ. ಈ ಷಡ್ಯಂತ್ರದ ಹಿಂದಿರುವವರ ಹೆಸರನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿಗಳ ಸ್ಥಾನವೂ ದಾಟಲಿಲ್ಲ. ಬಿಜೆಪಿ ವಿರುದ್ಧ ಮಾಡಿದ ಸುಳ್ಳು ಆರೋಪಕ್ಕಾಗಿ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ಮೇಲೆ ಬಿಜೆಪಿ ಕೇಸ್ ದಾಖಲಿಸಿದ್ದು, ರಾಹುಲ್ ಗಾಂಧಿ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ ಎಂದರು.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ, 60ಕ್ಕೂ ದಿನಗಳಾಗಿವೆ. ಪೋಕ್ಸೋ ಕೇಸ್ ದಾಖಲಾದ ದಿನವೇ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ದೂರುದಾರ ಮಹಿಳೆ ಮಮತಾ ಐಎಎಸ್, ಐಪಿಎಸ್ ಅಧಿಕಾರಿಗಳು, ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಸುಮಾರು 53 ಜನರ ವಿರುದ್ಧವೂ ಕೇಸ್ ದಾಖಲಿಸಿದ್ದಾಳೆ. ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಆರೋಪಕ್ಕೆ ಆಧಾರ ಸಹ ಇಲ್ಲ ಎಂದಿದ್ದರು. ಈಗ ಅನಾರೋಗ್ಯದಿಂದ ಮಮತಾ ಸಾವನ್ನಪ್ಪಿದ್ದಾರೆ. ಮಮತಾ ವರ್ತನೆಯಿಂದ ಪ್ರತ್ಯೇಕವಾಗಿದ್ದ ಮಗನನ್ನು ಕರೆ ತಂದು, ಯಡಿಯೂರಪ್ಪ ವಿರುದ್ಧದ ಪ್ರಕರಣ ಮುನ್ನೆಲೆಗೆ ತಂದಿದ್ದಾರೆ ಎಂದು ಕಿಡಿಕಾರಿದರು.
ದೂರುದಾರ ಮಹಿಳೆ ಮಮತಾ ಯಡಿಯೂರಪ್ಪ ನಿವಾಸಕ್ಕೆ ತಮ್ಮ ಮಗಳ ಸಮೇತ ಬಂದಿದ್ದಳು. ಪತಿಯ ಸೋದರ ಸಂಬಂಧಿಗಳು ಅಪ್ರಾಪ್ತಳಾದ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಆಗ ಯಡಿಯೂರಪ್ಪ ಅವರು ಆಯುಕ್ತರಿಗೆ ಹೇಳಿ, ನೊಂದ ಮಹಿಳೆಗೆ ನ್ಯಾಯ ಕೊಡಿಸಲು ಹೇಳಿದ್ದರು. ಅಲ್ಲದೇ, ಬಜಾಜ್ ಕಂಪನಿಯಿಂದ ತನಗೆ ₹5 ಸಾವಿರ ಕೋಟಿ ಬರಬೇಕಿದ್ದು, ಅದನ್ನು ಕೊಡಿಸುವಂತೆಯೂ ಆಕೆ ಒತ್ತಾಯಿಸಿದ್ದರು. ಮಹಿಳೆಗೆ ಅಷ್ಟೊಂದು ಹಣ ಎಲ್ಲಿಂದ ಬಂದಿತ್ತು? ಆಕೆಯ ಬ್ಯಾಂಕ್ ಖಾತೆ ಬಗ್ಗೆಯೂ ತನಿಖೆಯಾಗಲೀ. ಆಕೆ ಸುಳ್ಳು ಹೇಳಿದ್ದಳಾ ಎಂಬ ಸತ್ಯಾಸತ್ಯತೆ ಸಹ ಗೊತ್ತಾಗಲಿದೆ ಎಂದು ರೇಣುಕಾಚಾರ್ಯ ಆಗ್ರಹಿಸಿದರು.ಗೃಹ ಸಚಿವ ಡಾ.ಪರಮೇಶ್ವರ ಅಂದೇ ಹೇಳಿದಂತೆ ಇದೊಂದು ರಾಜಕೀಯಪ್ರೇರಿತ ಕೇಸ್ ಆಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ಕೈಗೊಂಡಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿ ನ್ಯಾಯಾಲಯದ ಮೆಟ್ಟಿಲೇರಿತ್ತು. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಹೀಗೆ ಕಾಂಗ್ರೆಸ್ಸಿನ ನಾಯಕರು ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಲೋಕಸಭೆ ಚುನಾವಣೆಯಲ್ಲೂ ಎರಡಂಕಿ ದಾಟಲಾಗದ ಕಾಂಗ್ರೆಸ್ ಸೇಡಿನ ರಾಜಕಾರಣಕ್ಕೆ ಮುಂದಾಗಿದೆ ಎಂದರು.
53 ಜನರನ್ನೂ ಬಂಧಿಸಲು ಸವಾಲು:ಧೀಮಂತ ನಾಯಕ ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡಿರುವ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನವಾಗಲಿದೆ. ರಾಜ್ಯವ್ಯಾಪಿ ಬಿಜೆಪಿ ಹೋರಾಟ ನಡೆಸಲಿದೆ. ಮೃತ ಮಮತಾ ಅವರ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಆಕೆಯ ಸಂಬಂಧಿಗಳನ್ನು ಯಾಕೆ ಬಂಧಿಸಿಲ್ಲ? ಮಮತಾ ಆರೋಪಿಸಿದ್ದ ಐಎಎಸ್, ಐಪಿಎಸ್, ಗಣ್ಯರು, ರಾಜಕೀಯ ನಾಯಕರನ್ನೂ ಬಂಧಿಸಲಿ ಎಂದು ರೇಣುಕಾಚಾರ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರಿಗೆ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ, ಸಂತೇಬೆನ್ನೂರು ಬಸವರಾಜ ಇತರರು ಇದ್ದರು.- - -
ಬಾಕ್ಸ್ * ತಲೆಮರೆಸಿಕೊಂಡಿಲ್ಲ, ಸೋಮವಾರ ವಿಚಾರಣೆಗೆ ಹಾಜರಾಗುತ್ತಾರೆಪೋಕ್ಸೋ ಕೇಸ್ ಸಂಬಂಧ ವಿಚಾರಣೆಗೆ ಬಿಎಸ್‌ವೈ ಬೇಡವೆಂದು ಸಿಐಡಿ ಅಧಿಕಾರಿಗಳು ಅಂದೇ ಹೇಳಿದ್ದರು. ಒಂದುವೇಳೆ ಬಿಎಸ್‌ವೈ ವಿರುದ್ಧದ ಆರೋಪಗಳಂತೆ ಸಾಕ್ಷ್ಯಗಳಿದ್ದರೆ ಅವುಗಳನ್ನು ನಾಶಪಡಿಸಲು ಯಡಿಯೂರಪ್ಪ ಅವರಿಗೆ ಆಗುತ್ತಿರಲಿಲ್ಲವೇ? ವಾಲ್ಮೀಕಿ ಅಭಿವೃದ್ಧಿ ನಿಗಮದ ₹180 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಸತ್ತು ಹೋಗಿದ್ದ ಕೇಸ್‌ಗೆ ಮರುಜೀವ ನೀಡಿದ ಕಾಂಗ್ರೆಸ್ ಸರ್ಕಾರ ಸಿಐಡಿ ಮೂಲಕ ಬಿಎಸ್‌ವೈಗೆ ನೋಟೀಸ್ ಕೊಡಿಸಿದೆ. ಯಡಿಯೂರಪ್ಪ ತಲೆಮರೆಸಿಕೊಂಡಿಲ್ಲ. ಸೋಮವಾರ ವಿಚಾರಣೆಗೆ ಹಾಜರಾಗುತ್ತಾರೆ ಎಂದು ರೇಣುಕಾಚಾರ್ಯ ತಿಳಿಸಿದರು.
- - - ಕೋಟ್ ಬಿಎಸ್‌ವೈ ಅವರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬಂದು, ಪತನ ಆಗುತ್ತದೆಂದು ನ್ಯಾಯಾಲಯ ಮೂಲಕ ಬಂದಿದ್ದೀರಿ. ಯಡಿಯೂರಪ್ಪಗೆ ಬಂಧಿಸಿದರೆ, ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಬಿಎಸ್‌ವೈ, ಬಿಜೆಪಿಗೆ ಕೆಟ್ಟ ಹೆಸರು ತರುವ ಕೆಲಸ ಕಾಂಗ್ರೆಸ್ಸಿಗರು ಮಾಡಿದ್ದಾರೆ. ನಿಮಗೆ ಗೌರವವಿದ್ದರೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸಿ. ಬಾಲಕಿ ಪ್ರಕರಣ ಹಿಂದೆ ಯಾರಿದ್ದಾರೆಂಬ ಬಗ್ಗೆ ಶೀಘ್ರದಲ್ಲೇ ಬಹಿರಂಗಪಡಿಸುವೆ- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ, ಬಿಜೆಪಿ ಮುಖಂಡ
- - - - 14ಕೆಡಿವಿಜಿ1:ದಾವಣಗೆರೆ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಯುವ ಮುಖಂಡ ಮಾಡಾಳ ಮಲ್ಲಿಕಾರ್ಜುನ ಇತರರು ಇದ್ದರು.