ತುಮಕೂರು: ಮುಂಬರುವ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು, ರಾಜ್ಯ ಸರ್ಕಾರದ ಬಡವರ ಪರವಾದ ಯೋಜನೆಗಳ ಬಗ್ಗೆ ಹಳ್ಳಿಹಳ್ಳಿಯಲ್ಲೂ ಪ್ರಚಾರ ನಡೆಸಿ ಪಕ್ಷವನ್ನು ಸದೃಢವಾಗಿ ಸಂಘಟನೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಹೇಳಿದರು.
ತುಮಕೂರು: ಮುಂಬರುವ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು, ರಾಜ್ಯ ಸರ್ಕಾರದ ಬಡವರ ಪರವಾದ ಯೋಜನೆಗಳ ಬಗ್ಗೆ ಹಳ್ಳಿಹಳ್ಳಿಯಲ್ಲೂ ಪ್ರಚಾರ ನಡೆಸಿ ಪಕ್ಷವನ್ನು ಸದೃಢವಾಗಿ ಸಂಘಟನೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಹೇಳಿದರು. ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಸಮೀಪದ ಬಡೇಸಾಬರ ಪಾಳ್ಯದಲ್ಲಿ ಕಾಂಗ್ರೆಸ್ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ನಡೆಯಲಿರುವ ಚುನಾವಣೆಗಳಿಗೆ ಜನಬೆಂಬಲ ಪಡೆಯಲು ತಾವು ಕ್ಷೇತ್ರಾದ್ಯಂತ ಪ್ರಚಾರ ಸಭೆಗಳನ್ನು ನಡೆಸಿ ಪಕ್ಷದ ಬಲವರ್ಧನೆ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.ಪಂಚ ಗ್ಯಾರಂಟಿ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಎರಡು ಸಾವಿರ ರು. ಶಕ್ತಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಅಲ್ಲದೆ, ಅನೇಕ ಜನೋಪಯೋಗಿ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು ಲಕ್ಷಾಂತರ ಜನರ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಸರ್ಕಾರದ ಒಂದಲ್ಲೊಂದು ಯೋಜನೆಯ ಫಲಾನುಭವಿಗಳೇ ಆಗಿದ್ದಾರೆ. ಜನಪರವಾದ ಸರ್ಕಾರ ರಾಜ್ಯದಲ್ಲಿರುವಾಗ ಸ್ಥಳೀಯವಾಗಿಯೂ ಜನಪರವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ತರಲು ಪ್ರತಿಯೊಬ್ಬರೂ ಸಂಕಲ್ಪ ಮಾಡಿ ಚುನಾವಣೆ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ ಇರ್ಫಾನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಜನರಿಗೆ ಸಹಾಯ ಆಗುವಂತಹ ಕಾರ್ಯಕ್ರಮಗಳನ್ನು ನೀಡಿದೆ. ಜೊತೆಗೆ ಮುಂದೆ ಬರಲಿರುವ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರನ್ನು ಗೆಲ್ಲಿಸಲು ಪ್ರಚಾರ ಕಾರ್ಯಕ್ರಮ ಆರಂಭಿಸಲಾಗಿದೆ ಎಂದರು. ಇದಕ್ಕೂ ಮೊದಲು ಬಡೇಸಾಬರಪಾಳ್ಯದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.