ಸಾರಾಂಶ
ಬಿಜೆಪಿಯ ‘ಭೀಮನ ಹೆಜ್ಜೆ’ ನೂರರ ರಥಯಾತ್ರೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಅಂಬೇಡ್ಕರ್ ಜೀವಿತಾವಧಿಯವರೆಗೂ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಲೇ ಬಂದಿದೆ. ಇದನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡುವ ತುರ್ತು ಅಗತ್ಯವಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗಕ್ಕೆ ಆಗಮಿಸಿದ ‘ಭೀಮನ ಹೆಜ್ಜೆ’ ನೂರರ ಸಂಭ್ರಮ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ಮಹಾತ್ಮ ಗಾಂಧಿ ಬೆಳಗಾವಿಗೆ ಬಂದು 100 ವರ್ಷವಾಗಿದೆ ಎಂದು ಕಾಂಗ್ರೆಸ್‌ನವರು ತೆರಿಗೆ ಹಣದಲ್ಲಿ ಅದ್ಧೂರಿ ಸಮಾರಂಭ ಮಾಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಅಂಬೇಡ್ಕರ್ ನೆನಪು ಬರಲಿಲ್ಲ. ಅವರಿಗೆ ಬಾಬಾ ಸಾಹೇಬ್‌ರ ಹೆಸರಿನಲ್ಲಿ ಮತಗಳು ಬೇಕು. ಆದರೆ ಸ್ಮರಣೆ ಮಾಡುವ ಕಾರ್ಯ ಮಾತ್ರ ಬೇಡವಾಗಿದೆ ಎಂದು ಕುಟುಕಿದರು.1952ರಲ್ಲಿ ನಡೆದ ದೇಶದ ಪ್ರಥಮ ಚುನಾವಣೆಯಲ್ಲಿ ಅಂಬೇಡ್ಕರ್ ಸ್ಪರ್ಧೆ ಮಾಡಿದಾಗ ಪಂಡಿತ್ ಜವಾಹರ ಲಾಲ್ ನೆಹರು ಅಂಬೇಡ್ಕರ್‌ರನ್ನು ಸೋಲಿಸಿದರು. ಎರಡನೇ ಚುನಾವಣೆಯಲ್ಲಿಯೂ ಅಂಬೇಡ್ಕರ್ ಸೋಲಿಸಿದ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ಇದರ ಸಂಭ್ರಮವನ್ನು ಕಾಂಗ್ರೆಸ್ ಆಚರಣೆ ಮಾಡಿದೆ ಎಂದು ವ್ಯಂಗ್ಯವಾಡಿದರು.
ನೆಹರುರವರ ಹೆಸರಿನಲ್ಲಿ ಪಂಡಿತ್ ಇತ್ತು. ಆದರೆ ಪಾಂಡಿತ್ಯ ಇರಲಿಲ್ಲ. ನೆಹರು ಸಂಪುಟದಲ್ಲಿ ಸಚಿವರಾಗಿದ್ದಾಗ ಅಂಬೇಡ್ಕರ್ ಅವರಿಗೆ ಸರಿಯಾದ ರೀತಿಯ ಖಾತೆ ನೀಡಿರಲಿಲ್ಲ. ಅಂದಿನ ಕಾಂಗ್ರೆಸ್ ಪಕ್ಷ ಯಾವುದೋ ಒಂದು ಖಾತೆ ನೀಡಿ ಅವಮಾನ ಮಾಡಿತ್ತು. ಅಂಬೇಡ್ಕರ್ ತಮ್ಮ ಖಾತೆಗೆ ರಾಜೀನಾಮೆ ನಿಡುವ ಪರಿಸ್ಥಿತಿಯನ್ನು ನೆಹರು ನಿರ್ಮಾಣ ಮಾಡಿದ್ದರು ಎಂದರು.ಪಂಡಿತ್ ಜವಾಹರ ಲಾಲ್ ನೆಹರು ಕುಟುಂಬದವರೆಲ್ಲಾ ಭಾರತ ರತ್ನ ಪ್ರಶಸ್ತಿ ಪಡೆದುಕೊಂಡರು. ಆದರೆ ದೇಶಕ್ಕಾಗಿ ಸಂವಿಧಾನ ನೀಡಿದ ಹಾಗೂ ಬಡವರಿಗಾಗಿ ತಮ್ಮ ಜೀವನವನ್ನು ಸವೆಸಿದ ಅಂಬೇಡ್ಕರ್ ರವರಿಗೆ ಜೀವಿತ ಅವಧಿಯಲ್ಲಿ ನೀಡಲಿಲ್ಲ. ವಿ.ಪಿ.ಸಿಂಗ್ ಅಂಬೇಡ್ಕರ್‌ಗೆ ಭಾರತ ರತ್ನ ನೀಡಿದರು. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಬಹಳ ವರ್ಷದಿಂದ ಎದ್ದಿದೆ. ಆದರೆ ಇದುವರೆವಿಗೂ ರಾಜ್ಯದ ಮುಖ್ಯಮಂತ್ರಿ ದಲಿತರಾಗಿಲ್ಲ. ಖರ್ಗೆಯವರು ಮುಖ್ಯಮಂತ್ರಿಯಾಗುವ ಎಲ್ಲಾ ರೀತಿಯ ಅರ್ಹತೆ ಇದ್ದರೂ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿಲ್ಲ ಎಂದು ತಿವಿದರು.
ಮಾಜಿ ಸಂಸದ ಜನಾರ್ದನ ಸ್ವಾಮಿ ಮಾತನಾಡಿ, ಅಂಬೇಡ್ಕರ್ ರವರು ದೇಶ ಮಾತ್ರವಲ್ಲ ಪ್ರಪಂಚ ಕಂಡು ಅದ್ಬುತ ನಾಯಕರಾಗಿದ್ದಾರೆ. ಬೇರೆ ದೇಶಗಳಿಗೆ ಅಂಬೇಡ್ಕರ್ ಮಾದರಿಯಾಗಿದ್ದಾರೆ ಎಂದರು.ವಿಪ ಸದಸ್ಯ ಕೆ.ಎಸ್.ನವೀನ್, ಶಾಸಕ ಸಿಮೆಂಟ್ ಮಂಜು, ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಮಹೇಂದ್ರ, ಜಿಲ್ಲಾ ಅಧ್ಯಕ್ಷ ಮುರಳಿ ಎಸ್ಸಿ ಮೋರ್ಚಾ ಮುಖಂಡರಾದ ದೀಪ ಶ್ರೀನಿವಾಸ್, ಮಲ್ಲಿಕಾರ್ಜನ್, ಕೆ.ಟಿ ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಚಾಲುಕ್ಯ ನವೀನ್, ರಾಮದಾಸ್, ಮುಖಂಡರಾದ ಮೋಹನ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಂಭು, ರವಿ ಮಹಾಂತಣ್ಣ, ಲೋಹಿತ್ ,ಭಾರ್ಗವಿ ದ್ರಾವಿಡ್, ಶ್ರೀನಿವಾಸ್ ಇದ್ದರು.