ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ: ಡಿಕೆಶಿ ಈಗೇನು ಹೇಳ್ತಾರೆ?

| Published : Mar 29 2024, 12:45 AM IST

ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತ: ಡಿಕೆಶಿ ಈಗೇನು ಹೇಳ್ತಾರೆ?
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಚಿವರೊಬ್ಬರು ಸೇರಿದಂತೆ ಶಾಸಕರು ರಾಜೀನಾಮೆಗೆ ಮುಂದಾಗಿರುವುದು ಅವರ ಪಕ್ಷದ ಭಿನ್ನಮತವನ್ನು ಬಹಿರಂಗಪಡಿಸಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಚಿವರೊಬ್ಬರು ಸೇರಿದಂತೆ ಶಾಸಕರು ರಾಜೀನಾಮೆಗೆ ಮುಂದಾಗಿರುವುದು ಅವರ ಪಕ್ಷದ ಭಿನ್ನಮತವನ್ನು ಬಹಿರಂಗಪಡಿಸಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಅಸುಂಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಟಿಕೆಟ್ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಈಗಾಗಲೇ ಬಾಗಲಕೋಟೆ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಭಿನ್ನಮತ ಹೊಗೆಯಾಡುತ್ತಿದೆ. ಕೋಲಾರದಲ್ಲಿ ಬಹಳ ವರ್ಷಗಳಿಂದ ಎರಡು ಗುಂಪುಗಳ ನಡುವೆ ಗುಂಪುಗಾರಿಕೆಯಿದೆ. ಪದೇ ಪದೆ ನಮ್ಮ ಪಕ್ಷದ ಭಿನ್ನಮತದ ಕುರಿತು ಕಮೆಂಟ್ ಮಾಡ್ತಿದ್ದ ಡಿಸಿಎಂ ಡಿ.ಕೆ. ಶಿವಕುಮಾರ ಅವರ ಪಕ್ಷದಲ್ಲಿ ಸದ್ಯ ಉಂಟಾಗಿರುವ ಭಿನ್ನಮತದ ಕುರಿತು ಈಗೇನು ಹೇಳ್ತಾರೆ? ಎಂದು ಪ್ರಶ್ನಿಸಿದರು.

ಇನ್ನು ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ, ಶಿವರಾಂ ಹೆಬ್ಬಾರ ಪಕ್ಷ ತೊರೆಯುವ ವಿಚಾರವನ್ನು ಅವರಿಗೆ ಕೇಳಿ, ನನ್ನನ್ನು ಕೇಳಬೇಡಿ ಎಂದರು. ಎಚ್.ಕೆ.ಪಾಟೀಲ ನಮ್ಮ ಹಿರಿಯರಾಗಿದ್ದು ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ವಿಚಾರ ಚರ್ಚೆ ಮಾಡುತ್ತಿದ್ದಾರೆ ಎಂದು ತಮ್ಮನ್ನು ''''ದಾವಣಗೆರೆ ಚಾರ್ಲಿ'''' ಎಂದು ಕರೆದಿರುವ ಸಚಿವ ಎಚ್.ಕೆ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಅವರು ಈ ವಯಸ್ಸಿನಲ್ಲಿ ಮಂತ್ರಿಗಿರಿಯಲ್ಲಿದ್ದಾರೆ, ನಾನು ಸಂಸದ ಆಗಿ ಕೆಲಸ ಮಾಡೋಕೆ ಏನು ತೊಂದರೆ ಇದೆ? ಅವರಿಗೆ ಬೇರೆ ಏನೂ ಮಾತಾಡೋಕೆ ಅವಕಾಶ ಇಲ್ಲ. ಸುಸಂಸ್ಕೃತ ಮಂತ್ರಿ ಅಂತ ನಾವು ತಿಳಿದುಕೊಂಡಿದ್ದೇವೆ ಅವರು ನಮ್ಮ ಹಿರಿಯರು, ಅವರಿಗೆ ಒಳ್ಳೆಯದಾಗಲಿ ಎಂದರು.