ಸಾರಾಂಶ
* ಬಿಜೆಪಿಯಿಂದ ಸರ್ಕಾರದ ವಿರುದ್ಧ ಘೋಷಣೆ, ಪ್ರತಿಭಟನೆ ಬೆಳಗಾವಿಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ದುರಾಡಳಿತಕ್ಕೆ ಸಾಕ್ಷಿ
ಕನ್ನಡಪ್ರಭ ವಾರ್ತೆ ದಾವಣಗೆರೆಮಹಿಳೆಯರಿಗೆ ರಾಜ್ಯದಲ್ಲಿ ಭದ್ರತೆ ಇಲ್ಲದಿರುವುದು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಇತರರ ನೇತೃತ್ವದಲ್ಲಿ ಪ್ರತಿಭಟಿಸುವ ಜೊತೆಗೆ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾದ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.ಶಾಸಕ ಬಿ.ಪಿ.ಹರೀಶ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅರಾಜಕತೆ ವಾತಾವರಣ ನಿರ್ಮಾಣವಾಗುತ್ತಿದೆ. ಗ್ಯಾರಂಟಿ ಯೋಜನೆ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯದ ಅಭಿವೃದ್ಧಿ, ಜನಹಿತವನ್ನೇ ಕಡೆಗಣಿಸುತ್ತಿದೆ. ಬರದಿಂದ ಇಡೀ ರಾಜ್ಯವೇ ತತ್ತರಿಸಿದ್ದು, ಬರ ನಿರ್ವಹಣೆ, ಅಭಿವೃದ್ಧಿ, ಆಡಳಿತ ಹೀಗೆ ಎಲ್ಲದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಆಳ್ವಿಕೆ ವಿಫಲವಾಗಿದೆ. ಬೆಳಗಾವಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿರುವುದು ನಾಚಿಕೆಗೇಡಿನ ಸಂಗತಿ. ಇದು ಕಾಂಗ್ರೆಸ್‌ನ ದುರಾಡಳಿತಕ್ಕೆ ಸಾಕ್ಷಿ ಎಂದರು.
ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಪ್ರತಿ 1 ಸಾವಿರ ಗಂಡು ಮಕ್ಕಳಿಗೆ 949 ಹೆಣ್ಣು ಮಕ್ಕಳಿದ್ದ ಲಿಂಗಾನುಪಾದ ಈಗ 917ಕ್ಕೆ ಕುಸಿದಿದೆ. ಆದರೂ ಸರ್ಕಾರ ಹೆಣ್ಣು ಭ್ರೂಣಹತ್ಯೆ ತಡೆಯುವಲ್ಲಿ ವಿಫಲವಾಗಿದೆ. ತಾಯಿ, ಮಡದಿ, ಸಹೋದರಿಯಾಗಿ ಬೇಕಾದ ಹೆಣ್ಣನ್ನು ಮಗಳಾಗಿ ಸ್ವೀಕರಿಸಲು ಸಿದ್ಧವಿಲ್ಲದ ಸಮಾಜದ ಮಾನಸಿಕತೆ ಬದಲಾಗಬೇಕಾಗಿದೆ. ಹೆಣ್ಣುಭ್ರೂಣ ಹತ್ಯೆ ತಡೆಗೆ ಸರ್ಕಾರ ಅತ್ಯಂತ ಕಠಿಣ ಕಾನೂನು ಜಾರಿಗೊಳಿಸಲಿ ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, ಕಾಂಗ್ರೆಸ್ ಆಳ್ವಿಕೆಯಲ್ಲಿ ಮಹಿಳೆಯರಿಗಾಗಲೀ, ಹಿಂದೂಗಳಿಗೆ ಗೌರವ, ರಕ್ಷಣೆ ಇಲ್ಲವಾಗಿದೆ. ದೌರ್ಜನ್ಯಕ್ಕೀಡಾದ ಮಹಿಳೆಗೆ ಸಾಂತ್ವನ ಹೇಳುವಷ್ಟೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವ್ಯವದಾನವಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕರ್ಮಕಾಂಡ ಮುಚ್ಚಿ ಹಾಕಲಷ್ಟೇ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಈಚೆಗೆ ಸಂಸತ್ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಆರೋಪಿಗಳೆಲ್ಲರೂ ಕಾಂಗ್ರೆಸ್ ಅನುಯಾಯಿಗಳೆಂಬುದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿದೆ. ಇದೆಲ್ಲದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದ್ದು, ಇದು ಆರಂಭವಷ್ಟೇ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಬೇತೂರು ಸಂಗನಗೌಡ, ಪಿ.ಸಿ.ಶ್ರೀನಿವಾಸ ಭಟ್, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಪಾಲಿಕೆ ಸದಸ್ಯ ಎಸ್.ಟಿ.ವೀರೇಶ, ಕೆ.ಎಂ.ವೀರೇಶ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ, ಮಂಜುಳಾ ಮಹೇಶ, ಭಾಗ್ಯ ಪಿಸಾಳೆ, ಜಿ.ವಿ.ಗಂಗಾಧರ, ಕೆ.ಎನ್.ಕಲ್ಲೇಶ, ಎಚ್.ಪಿ.ವಿಶ್ವಾಸ, ನೀಲಗುಂದ ರಾಜು, ಕಿಶೋರ ಇತರರಿದ್ದರು.ಸಂತ್ರಸ್ತ ಮಹಿಳೆಗೆ ಪರಿಹಾರ ನೀಡಿದೇಶದಲ್ಲೇ ಅತೀ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗುತ್ತಿರುವುದು ನೋವಿನ ಸಂಗತಿ. ಮಹಿಳಾ ಸಬಲೀಕರಣ ಬಗ್ಗೆ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್ ಆಳ್ವಿಕೆಯಲ್ಲಿ ಹೆಣ್ಣು ಜೀವ ಮತ್ತು ಜೀವನಕ್ಕೆ ಭದ್ರತೆಯೇ ಇಲ್ಲದಂತಾಗಿದೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ಮಹಿಳೆಯೊಬ್ಬರ ಬೆತ್ತಲೆಗೊಳಿಸಿ, ಥಳಿಸಿರುವುದು ಕಾಂಗ್ರೆಸ್‌ನ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಸಂತ್ರಸ್ತ ಮಹಿಳೆಗೆ ಸರ್ಕಾರ 10 ಲಕ್ಷ ರು. ಪರಿಹಾರ ನೀಡಬೇಕು. ಡಾ.ಎ.ಎಚ್.ಶಿವಯೋಗಿ ಸ್ವಾಮಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ,