ಸಾರಾಂಶ
ರಾಜ್ಯದಲ್ಲಿ ಕಾಂಗ್ರೆಸ್ ಧ್ವಜ ಶಾಶ್ವತವಾಗಿ ಹಾರಾಟ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಇದು ಕಾಂಗ್ರೆಸ್ ಕಾಲ. ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಮೇಲೆ ಹೇಗೆ ಧ್ವಜ ಹಾರಾಡುತ್ತಿದೆಯೋ ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧ್ವಜ ಶಾಶ್ವತವಾಗಿ ಹಾರಾಟ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಮದ್ದೂರು ಹೊರವಲಯದ ಕೆಸ್ತೂರು ಸರ್ಕಲ್‌ನಲ್ಲಿ ಮದ್ದೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸೋಮವಾರ ಚಾಲನೆ ಸಮಾರಂಭದಲ್ಲಿ ಮಾತನಾಡಿದರು. ಮೋದಿ ಅಚ್ಛೇದಿನ್ ಆಯೇಗಾ ಎಂದು ಹೇಳಿ ಹನ್ನೊಂದು ವರ್ಷವಾಯಿತು. ಇದುವರೆಗೂ ಆ ಅಚ್ಛೇದಿನ್ ಬರಲೇ ಇಲ್ಲ. ಜನರ ಖಾತೆಗೆ ₹೧೫ ಲಕ್ಷ ಬರಲಿಲ್ಲ. ನಾವು ಸುಳ್ಳು ಹೇಳುವುದಿಲ್ಲ. ನುಡಿದಂತೆ ನಡೆಯುವುದು ಕಾಂಗ್ರೆಸ್‌ನ ಗುಣ. ಅದನ್ನು ಈ ಅವಧಿಯಲ್ಲಿ ಮಾಡಿ ತೋರಿಸಿದ್ದೇವೆ ಎಂದು ದೃಢವಾಗಿ ತಿಳಿಸಿದರು.
ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಮೂಡಿದೆ. ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬರುವುದು ಹಗಲುಗನಸು ಮಾತ್ರ. ಇನ್ನೇನಿದ್ದರೂ ಕಾಂಗ್ರೆಸ್ ಅಭಿವೃದ್ಧಿ ಪರ್ವಕಾಲ ೨೦೨೮ರಲ್ಲಿಯೂ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದರು.ಬಿಜೆಪಿ-ಜೆಡಿಎಸ್ ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಜನರಿಗೆ ಒಂದೇ ಒಂದು ಗ್ಯಾರಂಟಿ ಯೋಜನೆ ಕೊಟ್ಟಿದ್ದರೆ ನಮ್ಮನ್ನು ಟೀಕಿಸುವುದಕ್ಕೆ ನೈತಿಕತೆ ಇರುತ್ತಿತ್ತು. ಈಗ ನೈತಿಕ ಬಲವನ್ನು ಎರಡೂ ಪಕ್ಷಗಳು ಕಳೆದುಕೊಂಡಿವೆ. ಅದಕ್ಕಾಗಿಯೇ ‘ಕಮಲ ಕೆಸರಿನಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಅಂದ, ದಾನ-ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆನ್ನ’ ಎಂದರು.