ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಕಿತ್ತೂರ ಕರ್ನಾಟಕವನ್ನು ಕಾಂಗ್ರೆಸ್ ಸಂಪೂರ್ಣ ಕಡೆಗಣಿಸಿದ್ದು, ಇದೀಗ ಆಕ್ರೋಶ ಭುಗಿಲೆದ್ದಿದೆ. "ಕೈ " ಕಮಾಂಡ್ 2ನೇ ಹಂತದ ನಾಯಕರನ್ನು ಗುರುತಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದು ಪಕ್ಷ ಸಂಘಟನೆ ಮೇಲೂ ಹೊಡೆತ ಬೀಳಲಿದೆ. ನಾವು ಬರೀ ಮುಖಂಡರು ಬಂದಾಗ ಜೈಕಾರ ಕೂಗಲು ಮಾತ್ರ ಸೀಮಿತವಾ? ಎಂಬ ಪ್ರಶ್ನೆಯನ್ನು ಮುಖಂಡರು ಎತ್ತಿದ್ದಾರೆ.
ಆಗಿರುವುದೇನು?ವಿಧಾನಸಭೆಯಿಂದ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ 7 ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿವೆ. ಏಳು ಸ್ಥಾನಗಳ ಪೈಕಿ 3 ಅಥವಾ 4 ಸ್ಥಾನಗಳನ್ನು ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಹಂಚಬೇಕು. ಉಳಿದ ಮೂರು ಸ್ಥಾನಗಳಲ್ಲಿ 2 ಸ್ಥಾನ ದಕ್ಷಿಣ ಕರ್ನಾಟಕ, ಒಂದು ಕರಾವಳಿ ಕರ್ನಾಟಕಕ್ಕೆ ಹಂಚಿಕೆಯಾಗಲಿ ಎಂಬ ಬೇಡಿಕೆ ಕಾಂಗ್ರೆಸ್ಸಿನದ್ದಾಗಿತ್ತು.
ಜತೆಗೆ ಪಕ್ಷ ಸಂಘಟನೆಯಾಗಬೇಕೆಂದರೆ ಹೊಸಬರಿಗೆ ಅಂದರೆ ಈ ಹಿಂದೆ ಪರಿಷತ್ ಅಥವಾ ಶಾಸಕರಾದವರಿಗೆ ಬಿಟ್ಟು, ಈವರೆಗೆ ಪಕ್ಷದಲ್ಲಿ ದುಡಿದು ಅವಕಾಶ ಸಿಗದೇ ಇರುವ 2ನೇ ಹಂತದ ನಾಯಕರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಕೆಪಿಸಿಸಿ ಹಾಗೂ ಎಐಸಿಸಿ ಮುಂದೆ ಇಟ್ಟಿದ್ದರು ಈ ಭಾಗದ ನಾಯಕರು.ಆದರೆ, ಕಲ್ಯಾಣ ಕರ್ನಾಟಕಕ್ಕೆ 3 ಸ್ಥಾನ ನೀಡಲಾಗಿದೆ. ಉಳಿದಂತೆ ಒಂದು ಕರಾವಳಿ ಕರ್ನಾಟಕಕ್ಕೆ, 3 ಸ್ಥಾನಗಳನ್ನು ದಕ್ಷಿಣ ಕರ್ನಾಟಕಕ್ಕೆ ಕೊಡಲಾಗಿದೆ. ಇದು ಕಿತ್ತೂರು ಕರ್ನಾಟಕದಲ್ಲಿ ಆಕ್ರೋಶವನ್ನುಂಟು ಮಾಡಿದೆ. ನಾವು ಬರೀ ನಾಯಕರು ಬಂದಾಗ ಜೈಕಾರ ಹಾಕಲು ಮಾತ್ರ ಸೀಮಿತವೇ? ಎಂಬ ಪ್ರಶ್ನೆಯನ್ನು ಈ ಭಾಗದ ನಾಯಕರು ಎತ್ತಿದ್ದರು.
ಅದರಲ್ಲೂ ಹೊಸಬರಿಗೆ ಕೊಡಬೇಕು ಎಂಬ ಬೇಡಿಕೆಯನ್ನು ಪುರಸ್ಕರಿಸಿಲ್ಲ. ಎರಡ್ಮೂರು ಬಾರಿ ವಿಧಾನಪರಿಷತ್ ಸದಸ್ಯರಾದವರಿಗೆ ಮತ್ತೆ ಮಣೆ ಹಾಕಲಾಗಿದೆ. ಹಾಗಾದರೆ 2ನೇ ಹಂತದ ನಾಯಕರು ಬೆಳೆಯಬಾರದೇ ಎಂಬ ಪ್ರಶ್ನೆಯನ್ನು ಇಲ್ಲಿನ ಮುಖಂಡರು ಎತ್ತಿದ್ದಾರೆ.ಯಾರ್‍ಯಾರು ಪ್ರಯತ್ನ:
ಹಾಗೆ ನೋಡಿದರೆ ಕಿತ್ತೂರ ಕರ್ನಾಟಕದಿಂದ ಸಾಕಷ್ಟು ಜನ ಪ್ರಯತ್ನಿಸಿದ್ದರು. ಧಾರವಾಡ ಜಿಲ್ಲೆಯಿಂದ ವಿಧಾನಪರಿಷತ್ ಮಾಜಿ ಸದಸ್ಯ, ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಮೋಹನ ಲಿಂಬಿಕಾಯಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಇಸ್ಮಾಯಿಲ್ ತಮಟಗಾರ, ಸದಾನಂದ ಡಂಗನವರ, ಎಫ್.ಎಚ್. ಜಕ್ಕಪ್ಪನವರ ಸೇರಿದಂತೆ ಹಲವರು ಪ್ರಯತ್ನಿಸಿದ್ದರೆ, ಗದಗ ಜಿಲ್ಲೆಯಿಂದ ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಕೆಲವರು ಪರಿಷತ್‌ಗೆ ಪ್ರಯತ್ನಿಸಿದ್ದರು. ಹಾವೇರಿ ಜಿಲ್ಲೆಯಿಂದ 2ನೇ ಹಂತದ ನಾಯಕರಾಗಿರುವ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಸಂಜೀವಕುಮಾರ ನೀರಲಗಿ, ಬೆಳಗಾವಿಯಿಂದ ಸುನಿಲ ಹನುಮನ್ನವರ, ಪಿ. ದಯಾನಂದ, ಉತ್ತರಕನ್ನಡ ಜಿಲ್ಲೆಯಿಂದ ಎಸ್.ಕೆ. ಹೆಗಡೆ, ವಿ.ಎಸ್. ಪಾಟೀಲ ಸೇರಿದಂತೆ ಹಲವರು ಪ್ರಯತ್ನಿಸಿದ್ದರು.ಇದರಲ್ಲಿ ಅಲ್ಪಸಂಖ್ಯಾತರ ಕೋಟದಡಿ ಇಸ್ಮಾಯಿಲ್ ತಮಟಗಾರ ಹೆಸರು ಕೊನೆಯವರೆಗೂ ಇತ್ತು. ಆದರೆ ಕೊನೆಕ್ಷಣದಲ್ಲಿ ಇವರ ಬದಲು ಬಲ್ಕಿಸ್‌ಬಾನು ಅವರಿಗೆ ಟಿಕೆಟ್ ದೊರೆತಿದೆ. ಇದೀಗ ಇಸ್ಮಾಯಿಲ್ ಬೆಂಬಲಿಗರು ಪ್ರತಿಭಟನೆ ಶುರು ಮಾಡಿದ್ದಾರೆ.
ಇನ್ನು ಈ ಏಳು ಸ್ಥಾನಗಳಲ್ಲಿ ಟಿಕೆಟ್ ಸಿಗದಿದ್ದರೂ ಜಗದೀಶ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕಾದರೂ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಈ ಸ್ಥಾನವನ್ನು ಅಖಂಡ ಧಾರವಾಡ ಜಿಲ್ಲೆ (ಧಾರವಾಡ, ಹಾವೇರಿ, ಗದಗ)ಯ ಲಿಂಗಾಯತ ಮುಖಂಡರಿಗೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ ಕೂಡ ಇಲ್ಲಿನ ನಾಯಕರಿಗೆ ಭರವಸೆ ನೀಡಿದ್ದರಂತೆ. ಆದರೆ ಅದು ಕೂಡ ಕಲ್ಯಾಣ ಕರ್ನಾಟಕಕ್ಕೆ ಹೋಗಿದೆ.ಹೀಗಾದರೆ ಹೇಗೆ?
ಸಂಘಟನೆ ಮಾಡಿ, ಸ್ಥಾನ ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ ಎಂದೆಲ್ಲ ಭಾಷಣ ಬೀಗಿಯುತ್ತಾರೆ ಅಷ್ಟೇ. ಆದರೆ ಸ್ಥಾನ ಕೊಡುವಾಗ ಮಾತ್ರ ತಮಗೆ ಬೇಕಾದವರಿಗೇ ಕೊಡುತ್ತಾರೆ. ಜತೆಗೆ ಈ ಭಾಗದ ಸಚಿವರು, ಶಾಸಕರು ಇಲ್ಲಿನ 2ನೇ ಹಂತದ ನಾಯಕರ ಪರವಾಗಿ ಲಾಬಿ ನಡೆಸಿ ಟಿಕೆಟ್ ತರುತ್ತಿಲ್ಲ. ಎಲ್ಲಿ ಅವರೇ ಬೆಳೆದುಬಿಡುತ್ತಾರೆ ಎಂಬ ಆತಂಕದಿಂದ ಈ ರೀತಿ ಮಾಡುತ್ತಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.ನಾವು ಬರೀ ಘೋಷಣೆ ಕೂಗಲು ಮಾತ್ರ ಸೀಮಿತವಾ? ಎಂಬ ಪ್ರಶ್ನೆ ಈ ಭಾಗದ ಮುಖಂಡರದ್ದು. ಇನ್ನಾದರೂ ಕಿತ್ತೂರ ಕರ್ನಾಟಕಕ್ಕೆ ಸೂಕ್ತ ಸ್ಥಾನಮಾನ ನೀಡಲು ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆ ಮೇಲೆ ಪರಿಣಾಮ ಬೀರುವುದು ಖಚಿತ ಎಂಬ ಮಾತು ಈ ಭಾಗದ 2ನೆಯ ಹಂತದ ನಾಯಕರದ್ದು.