ಶೇ.50 ರಷ್ಟು ವಕಾರ ಮಾರುವ ಆದೇಶ ನೀಡಿದ್ದೇ ಕಾಂಗ್ರೆಸ್

| Published : Aug 18 2024, 01:53 AM IST / Updated: Aug 18 2024, 01:54 AM IST

ಶೇ.50 ರಷ್ಟು ವಕಾರ ಮಾರುವ ಆದೇಶ ನೀಡಿದ್ದೇ ಕಾಂಗ್ರೆಸ್
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ಆಸ್ತಿ ಕಬಳಿಸುವ ಠರಾವು ನಾವು ಮಾಡಿಲ್ಲ. 2013 ರಲ್ಲಿ ಶೇ. 50 ರಷ್ಟು ವಕಾರಗಳ ಆಸ್ತಿಯನ್ನು ಗುತ್ತಿಗೆದಾರರಿಗೆ ಮಾರಲು ನಗರಸಭೆಯಲ್ಲಿ ಠರಾವು ಮಾಡಿದ್ದು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ.

ಗದಗ: ಗದಗ-ಬೆಟಗೇರಿ ನಗರಸಭೆಯ ಕೋಟ್ಯಂತರ ಬೆಲೆ ಬಾಳುವ ವಕಾರಗಳನ್ನು(ಖಾಲಿ ಜಾಗೆ) ಶೇ. 50ರಷ್ಟು ಮಾರಾಟ ಮಾಡಲು ಆದೇಶ ನೀಡಿದ್ದೇ ಕಾಂಗ್ರೆಸ್ ಸರ್ಕಾರವಿದ್ದಾಗ. ಅದರಲ್ಲಿಯೂ ಎಚ್.ಕೆ.ಪಾಟೀಲರೇ ಸಚಿವರಿದ್ದಾಗ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು (ತೋಟಪ್ಪ) ಕುರುಡಗಿ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೆಲ್ಲ ಈಗಿನ ವಿರೋಧ ಪಕ್ಷದ ನಾಯಕ ಎಲ್.ಡಿ.ಚಂದಾವರಿ ಅವರಿಗೂ ಗೊತ್ತಿದೆ. ಆದರೂ ಅನಗತ್ಯವಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಗದಗ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಇದು ಹುನ್ನಾರ, ಮೂವರು ಸದಸ್ಯರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ ಅಧಿಕಾರ ಹಿಡಿಯುವ ಸಂಚು ನಡೆದಿದೆ ಎಂದರು.

ನಗರಸಭೆ ಹಿರಿಯ ಸದಸ್ಯ ಚಂದ್ರು ತಡಸದ ಮಾತನಾಡಿ, ನಗರಸಭೆ ಆಸ್ತಿ ಕಬಳಿಸುವ ಠರಾವು ನಾವು ಮಾಡಿಲ್ಲ. 2013 ರಲ್ಲಿ ಶೇ. 50 ರಷ್ಟು ವಕಾರಗಳ ಆಸ್ತಿಯನ್ನು ಗುತ್ತಿಗೆದಾರರಿಗೆ ಮಾರಲು ನಗರಸಭೆಯಲ್ಲಿ ಠರಾವು ಮಾಡಿದ್ದು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ. ಅಂದಿನ ಠರಾವಿಗೆ ಎಂ.ಸಿ.ಶೇಖ್, ಮಂಜುನಾಥ ಪೂಜಾರ ಸೂಚಕರು ಅನುಮೊದಕರಾಗಿದ್ದರು ಎಂದು ಅಂದಿನ ದಾಖಲೆ ಪ್ರದರ್ಶನ ಮಾಡಿದರು.

2017ರಲ್ಲಿ 54 ವಕಾರಗಳನ್ನು ತೆರವು ಮಾಡಿರುವ ಜಿಲ್ಲಾಡಳಿತ ಕ್ರಮದ ವಿರುದ್ಧ ವಕಾರಗಳ ಲೀಜ್ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಅವರ ಅರ್ಜಿ ಪುರಸ್ಕರಿಸಿ ಆದೇಶಿಸಿತು. ಕೋರ್ಟ್ ಆದೇಶ ಮೇರೆಗೆ ನಗರಸಭೆ ಸಾಮಾನ್ಯ ಸಭೆಯ 378ನೇ ಠರಾವು ಪಾಸ್‌ ಮಾಡಲಾಗಿದೆ. ಅದೇ ಠರಾವು ಪ್ರತಿ ಲೀಜ್ ದಾರರು ಕೋರ್ಟ್ ಗೆ ಸಲ್ಲಿಸಿದ ನಂತರ ಕೋರ್ಟ್ ಆ.12 ರಂದು ಮಾಡಿದ ಆದೇಶದ ಮೇಲೆ ಅವರಿಗೆ ಲೀಜ್ ವಿಸ್ತರಿಸಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ವರ್ಷಕ್ಕೆ ₹3500 ಪ್ರತಿ ಲೀಜ್ ನಿಗದಿ ಪಡಿಸಿದ್ದರು. ನಮ್ಮ ಅವಧಿಯಲ್ಲಿ ₹ 14 ಸಾವಿರ ನಿಗದಿ ಮಾಡಲಾಗಿದೆ ಎಂದರು.

ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಅಧಿಕಾರ ಇದ್ದ ಸಂದರ್ಭದಲ್ಲಿ ಶೇ. 50:50 ಅನುಪಾತದಲ್ಲಿ ನಗರಸಭೆ ಮತ್ತು ಲೀಜ್ ದಾರರಿಗೆ ನೀಡಬೇಕು ಎಂಬ ಠರಾವು ಪಾಸ್‌ ಮಾಡಿದ್ದರು. ಈ ಆದೇಶವನ್ನು ಅಂದಿನ ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿತ್ತು. ತದ ನಂತರ ಕೋರ್ಟ್ ಆದೇಶದ ಮೇರೆಗೆ ವಕಾರಗಳನ್ನು ಗುತ್ತಿಗೆ ನೀಡಲಾಗಿದೆ. ಠರಾವು ನಕಲಿ, ಸಹಿ ನಕಲಿ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡಿದೆ. ಸಹಿ ನಕಲಿ ಅಲ್ಲ. ಅಸಲಿ ಆಗಿದೆ. ಪೌರಾಯುಕ್ತರಿಗೆ ಭಯ ಹುಟ್ಟಿಸಿ ದೂರು ದಾಖಲಿಸುವಂತೆ ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ವಿನಾಯಕ ಮಾನ್ವಿ, ನಾಗರಾಜ ತಳವಾರ, ವಿಜಯಲಕ್ಷ್ಮಿ ದಿಂಡೂರ, ಮಹಾಂತೇಶ ನಲವಡಿ, ಸುಧೀರ ಕಾಟಿಗಾರ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.

ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿರುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರಿಗೆ ಸಹಿಸಲು ಆಗುತ್ತಿಲ್ಲ. ಹೇಗಾದರೂ ಮಾಡಿ ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎನ್ನುವ ಹುನ್ನಾರ ನಡೆಸಿದ್ದು, ಅದರ ಭಾಗವಾಗಿಯೇ ನಮ್ಮ 3 ಜನ ಸದಸ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ ನೀವು ಮಾಡುತ್ತಿರುವ ಕಾನೂನು ಸಮಸ್ಯೆಗಳನ್ನು ನಮ್ಮ ಪಕ್ಷ ಸಮರ್ಥವಾಗಿ ಎದುರಿಸಲಿದೆ. ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಎಚ್.ಕೆ. ಪಾಟೀಲರು ಹೇಗೆ ನಡೆದುಕೊಂಡಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಗದಗ ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಬಿಜೆಪಿ ಸದಸ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇದು ಸೇಡಿನ ರಾಜಕಾರಣ, ಅಧಿಕಾರಿಗಳಿಗೆ ಒತ್ತಡ ಹಾಕಿ ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳ ಸಹಿ ಕುರಿತು ಸಮಗ್ರ ತನಿಖೆಯಾಗಲಿ ಸತ್ಯ ಹೊರಬರಲಿದೆ. ಈ ಬಗ್ಗೆ ಬಿಜೆಪಿ ಕಾನೂನು ಹೋರಾಟ ಮಾಡಲಿದೆ ಎಂದು ಹಿರಿಯ ನ್ಯಾಯವಾದಿ, ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ. ಹಿರೇಮಠ ಹೇಳಿದರು.