ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಸ್ಥಾನ ರದ್ದು ।

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಾಲ್ಕೂವರೆ ವರ್ಷಗಳ ಸುದೀರ್ಘ ಅವಧಿಯ ಕಾನೂನು ಹೋರಾಟದ ಬಳಿಕ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ಈವರೆಗೆ ವಿಧಾನಪರಿಷತ್‌ ಸದಸ್ಯರಾಗಿದ್ದ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರ ಸ್ಥಾನ ರದ್ದಾಗಿದೆ.

2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರ ವಿರುದ್ಧ ಕೇವಲ ಆರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ವೇಳೆ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತ ದಾನ ಮಾಡುವ ಹಕ್ಕಿಲ್ಲ ಎಂದು ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅಂದಿನಿಂದನೂ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಮುಂದಿವರಿದಿತ್ತು. ಅಂತಿಮವಾಗಿ ಶುಕ್ರವಾರ 2021ರ ಚುನಾವಣೆಯ ಮತಗಳ ಮರು ಎಣಿಕೆ ನಡೆಸಿದ್ದು, 9 ಮತದಿಂದ ಕಾಂಗ್ರೆಸ್‌ನ ಗಾಯತ್ರಿ ಶಾಂತೇ ಗೌಡ ಗೆಲುವು ಸಾಧಿಸಿದ್ದಾರೆ ಎಂದು ಆದೇಶಿಸಿದೆ. ಹೀಗಾಗಿ ಗಾಯತ್ರಿ ಶಾಂತೇಗೌಡ ಅವರು ಮುಂದಿನ ಒಂದೂವರೆ ವರ್ಷದ ಅವಧಿಗೆ ನೂತನ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ಚಲಾಯಿಸಲಿದ್ದಾರೆ.


ಹಿನ್ನೆಲೆ:

2021ರ ಡಿಸೆಂಬರ್ 10ರಂದು ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳಲ್ಲದೆ ಪುರಸಭೆ, ಪಟ್ಟಣಪಂಚಾಯಿತಿಯ 12 ಮಂದಿ ನಾಮನಿರ್ದೇಶನ ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.

ಡಿಸೆಂಬರ್ 14 ರಂದು ಮತಎಣಿಕೆ ನಡೆದಿದ್ದು, ಒಟ್ಟು 2410 ಮತಗಳಲ್ಲಿ 29 ಅಸಿಂಧುವಾಗಿದ್ದು, 2371ಮತ ಸಿಂಧುವಾಗಿತ್ತು. ಆಗ ಎಂ.ಕೆ.ಪ್ರಾಣೇಶ್ 1188 ಮತಪಡೆದರೆ, ಗಾಯತ್ರಿಶಾಂತೇಗೌಡ 1182 ಮತಪಡೆದಿದ್ದರು. ಬಿಜೆಪಿಯ ಎಂ.ಕೆ.ಪ್ರಾಣೇಶ್, ಕಾಂಗ್ರೆಸ್‌ನ ಎ.ವಿ.ಗಾಯತ್ರಿಶಾಂತೇಗೌಡ ವಿರುದ್ಧ 6ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಇದರಿಂದ ಮರು ಮತ ಎಣಿಕೆಗೆ ಗಾಯಿತ್ರಿ ಶಾಂತೇಗೌಡ ಮನವಿ ಸಲ್ಲಿಸಿದ್ದರು. ಆದರೆ ಆಗ ಜಿಲ್ಲಾ ಚುನಾವಣಾಧಿ ಕಾರಿಯಾಗಿದ್ದ ಕೆ.ಎನ್.ರಮೇಶ್ ಚುನಾವಣಾ ಆಯೋಗದ ಸೂಚನೆ ಮೇರೆಗೆ ಫಲಿತಾಂಶ ಪ್ರಕಟಿಸಿದ್ದರು. ಇದರಿಂದ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಕ ಸದಸ್ಯರಿಗೆ ಮತದಾನ ಮಾಡುವ ಅವಕಾಶವಿಲ್ಲ ಎಂದು ಗಾಯತ್ರಿಶಾಂತೇಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

2025 ರ ಫೆ. 28ರಂದು ಮರು ಮತ ಎಣಿಕೆ ನಡೆಸಿ ಬಳಿಕ ಫಲಿತಾಂಶವನ್ನ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸುದೀರ್ಘ ವಿಚಾರಣೆ ಬಳಿಕ ಸುಪ್ರೀಂ ಕೋರ್ಟ್ ಶುಕ್ರವಾರ ಅಂತಿಮ ತೀರ್ಪು ಪ್ರಕಟಿಸಿದೆ.-- ಕೋಟ್.....

ಕೊನೆಗೂ ಸತ್ಯವೇ ಗೆದ್ದಿದೆ

ಹೈ ಕೋರ್ಟ್‌ನಲ್ಲಿ ನಾಮನಿರ್ದೇಶಿತ ಸದಸ್ಯರು ಮತದಾನ ಮಾಡಬಾರದು ಎಂಬ ನಮ್ಮ ವಾದಕ್ಕೆ ನ್ಯಾಯ ಸಿಕ್ಕಿದೆ. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿದ್ದರು. ಸುಪ್ರೀಂ ಕೋರ್ಟ್ ಮರುಮತ ಎಣಿಕೆ ಮಾಡಿ ಮುಚ್ಚಿದ ಲಕೋಟೆಯಲ್ಲಿ ಅದನ್ನ ನ್ಯಾಯಾಲಯಕ್ಕೆ ನೀಡುವಂತೆ ಆದೇಶಿಸಿತ್ತು. ಮರುಮತ ಎಣಿಕೆ ಮಾಡಿ ಒಂದೂವರೆ ವರ್ಷ ಆಗಿತ್ತು. ಶುಕ್ರವಾರ ಹೈಕೋರ್ಟ್ ಫಲಿತಾಂಶ ಪ್ರಕಟ ಮಾಡಿದೆ. ಕೊನೆಗೂ ಸತ್ಯವೇ ಗೆದ್ದಿದೆ.

- ಗಾಯತ್ರಿ ಶಾಂತೇಗೌಡ, ವಿಧಾನ ಪರಿಷತ್ ನೂತನ ಸದಸ್ಯೆಫೋಟೋ:

ಹೈಕೋರ್ಟ್ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಗಾಯತ್ರಿ ಶಾಂತೇಗೌಡ ಹಾಗೂ ಬೆಂಬಲಿಗರು ಸಂಭ್ರಮಿಸಿದರು.