ಕನ್ನಡಪ್ರಭ ವಾರ್ತೆ, ಶಿಡ್ಲಘಟ್ಟ

2028ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಬರುವುದಲ್ಲದೆ 2029 ಕ್ಕೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಎಬಿಡಿ ಸಂಸ್ಥೆ ಅಧ್ಯಕ್ಷ ರಾಜೀವಗೌಡ ಹೇಳಿದರು. ನಗರದಲ್ಲಿ ಭಾನುವಾರ ಕೆಪಿಸಿಸಿ ನೂತನ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭಕ್ಕೆ ತೆರಳಲು ಪ್ರವಾಸಿ ಮಂದಿರದ ಬಳಿ ಕಾರ್ಯಕರ್ತರ ಬಸ್ಸುಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮವಷ್ಟೇ ಅಲ್ಲ, 2028ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಹಾಗೂ 2029ರಲ್ಲಿ ಹೆಚ್ಚು ಸಂಸದರನ್ನು ಗೆಲ್ಲಿಸಿ ಕೇಂದ್ರದಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ಸಂಕಲ್ಪ ಸಮಾವೇಶ ಆಗಿದೆ ಎಂದರು.ಈ ಕಾರ್ಯಕ್ರಮಕ್ಕೆ ಶಿಡ್ಲಘಟ್ಟ ಕ್ಷೇತ್ರದಿಂದ 100 ಕ್ಕೂ ಹೆಚ್ಚು ಬಸ್ಸು, 100 ಕಾರುಗಳಿಂದ ಸುಮಾರು 7 ಸಾವಿರ ಜನ ಅರಮನೆ ಮೈದಾನದಲ್ಲಿ ನಡೆಯುವಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿ ಚಳವಳಿಯಿಂದ ರಾಷ್ಟ್ರೀಯ ರಾಜಕಾರಣದವರೆಗೆ ಬೆಳೆದಿರುವ ಬಿ.ಕೆ. ಹರಿಪ್ರಸಾದ್ ಅವರ ಸಂಘಟನಾ ಸಾಮರ್ಥ್ಯ ಮತ್ತು ತತ್ವನಿಷ್ಠ ನಾಯಕತ್ವದ ಪ್ರತೀಕವಾಗಿದ್ದು, ಅವರ ಸಾರಥ್ಯದಲ್ಲಿ ರಾಜ್ಯ ಕಾಂಗ್ರೆಸ್ ಇನ್ನಷ್ಟು ಬಲಿಷ್ಠವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಅಪ್ಸರ್ ಪಾಷ, ಮಾಜಿ ಸದಸ್ಯರಾದ ಸಮೀವುಲ್ಲಾ ನಾರಾಯಣಸ್ವಾಮಿ, ಗುಡಿಹಳ್ಳಿ ನಾರಾಯಣಸ್ವಾಮಿ, ರಾಮಚಂದ್ರಪ್ಪ, ಸಾದಲಿ ಗೋವಿಂದರಾಜು, ಎನ್ಟಿಆರ್ ನರಸಿಂಹ, ಮಂಜುನಾಥ್, ತನ್ನು, ಸೈಯದ್, ಸಲಾಮ್ ಸಾಬ್, ರಿಯಾಜ್ ಪಾಷ, ಗಾಯಿತ್ರಿ ಮುಂತಾದವರು ಉಪಸ್ಥಿತರಿದ್ದರು.ಸುದ್ದಿ ಚಿತ್ರಿ ೧

ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭಕ್ಕೆ ತೆರಳಲು ಪ್ರವಾಸಿ ಮಂದಿರದ ಬಳಿ ಕಾರ್ಯಕರ್ತರ ಬಸ್ಸುಗಳಿಗೆ ರಾಜೀವ್ ಗೌಡ ಚಾಲನೆ ನೀಡಿದರು.