ಸಾರಾಂಶ
ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಂಚಗುಳಿತನ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಇಂಥ ಕೆಟ್ಟ ಸರ್ಕಾರವನ್ನು ರಾಜ್ಯದ ಜನರು ಎಂದು ಸಹ ಕಂಡಿರಲಿಲ್ಲ.
ಕೊಪ್ಪಳ:
ರಾಜ್ಯದಲ್ಲಿ ಭ್ರಷ್ಟಾಚಾರ, ಲಂಚಗುಳಿತನ ತಾಂಡವಾಡುತ್ತಿದ್ದು ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಂಚಗುಳಿತನ, ಭ್ರಷ್ಟಾಚಾರ ತಾಂಡವಾಡುತ್ತಿದೆ. ಇಂಥ ಕೆಟ್ಟ ಸರ್ಕಾರವನ್ನು ರಾಜ್ಯದ ಜನರು ಎಂದು ಸಹ ಕಂಡಿರಲಿಲ್ಲ ಎಂದು ಕಿಡಿಕಾರಿದರು.
ಸರ್ಕಾರದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಖುದ್ದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಗಣಿಗಾರಿಕೆ, ಮರಳುಗಾರಿಕೆ ಅಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂಥ ಆಡಳಿತದಿಂದ ರಾಜ್ಯದ ಖಜಾನೆಗೆ ಅಪಾರ ಹಾನಿಯಾಗುತ್ತಿದೆ ಎಂದು ಆರೋಪಿಸಿದ ಅವರು, ಕೊಪ್ಪಳ ಕ್ಷೇತ್ರದಲ್ಲಿಯೇ ಮರಳುಗಾರಿಕೆಯ ವಿರುದ್ಧ ಅಧಿಕಾರಿಗಳು ದಾಳಿ ಮಾಡಿದರೂ ಸಹ ಯಾರೊಬ್ಬರ ಮೇಲೆಯೂ ಕ್ರಮವಹಿಸಲಿಲ್ಲ. ಯಾರು ಎನ್ನುವುದನ್ನು ಪತ್ತೆ ಮಾಡಲಿಲ್ಲ. ಇದ್ಯಾವ ಆಡಳಿತ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ. ಮೀತಿ ಮೀರಿದ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಈ ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ಹಿಟ್ನಾಳ ಕುಟುಂಬದ ಆಶೀರ್ವಾದ:
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಗೆ ಹಿಟ್ನಾಳ ಕುಟುಂಬದ ಆಶೀರ್ವಾದವಿರುವುದರಿಂದ ತಪ್ಪಿಸ್ಥರ ವಿರುದ್ಧ ಕ್ರಮವಾಗುತ್ತಿಲ್ಲ. ಹಿರೇಹಳ್ಳವನ್ನು ಸ್ವಚ್ಛ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟರೇ ಅದರುದ್ದಕ್ಕೂ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತದೆ. ಇದೆಲ್ಲವೂ ಗೊತ್ತಿದ್ದು, ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ಅಪಾದಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಮರೆತಿದ್ದಾರೆ, ಮೂಡಾ ಹಗರಣ, ವಾಲ್ಮೀಕಿ ಹಗರಣ, ಲಂಚಾವತಾರ.. ಹೀಗೆ ಹಗರಣಗಳ ಸರಮಾಲೆ ಸರ್ಕಾರದಲ್ಲಿ ನಡೆಯುತ್ತಿದ್ದರೂ ಅದರ ಮೇಲೆ ಕ್ರಮವಿಲ್ಲದಂತೆ ಆಗಿದೆ ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನ ಮಠ, ರಾಜ್ಯ ಕಾರ್ಯಕಾರಿಣಿ ಕಾರ್ಯದರ್ಶಿ ಶರಣಪ್ಪ ಕುಂಬಾರ, ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು, ತಾಲೂಕು ಅಧ್ಯಕ್ಷ ಯಮನಪ್ಪ ಕಟ್ಟಿಗಿ ನಗರಾಧ್ಯಕ್ಷ ಸೋಮನಗೌಡ ಹಾಗೂ ಜೆಡಿಎಸ್ ಮುಖಂಡರಾದ ಈಶಪ್ಪ ಮಾದನೂರ, ದೇವಪ್ಪ ಕಟ್ಟಿಮನಿ, ಸಂಗಮೇಶ ಡಂಬಳ, ವಿಜಯಕುಮಾರ ಪೂಜಾರ, ಶರಣಪ್ಪ ಜಡಿ, ಕಳಕನಗೌಡ ಹಲಗೇರಿ, ರವಿ ಮಾಗಳ, ವೀರೇಶಗೌಡ ಚಿಕ್ಕಬಗನಾಳ, ರಮೇಶ ಡಂಬ್ರಹಳ್ಳಿ, ಮಾರುತಿ ಪೇರ್ಮಿ, ಪ್ರವೀಣ ಇಟಗಿ, ಭೀಮಣ್ಣ ಕವಲೂರ, ಸೈಯದ್ ಮಹಮ್ಮದ್ ಹುಸೇನ್, ಶರಣಪ್ಪ ಮತ್ತೂರ, ಶೇಖರಗೌಡ ಪಾಟೀಲ್, ಬಸವರಾಜ ಗುಳಗುಳಿ, ಭೀಮರೆಡ್ಡಿ, ವಸಂತ ಹಟ್ಟಿ, ದೇವರಾಜ ಅಗಳಕೇರಾ, ದ್ಯಾಮಣ್ಣ ಕಲಕೇರಿ, ಮಹೇಶ ಆಗಳಕೇರಿ, ಪ್ರಕಾಶ ಬಸರಿಗಿಡ, ಸಿದ್ದರೆಡ್ಡಿ ಮೈನಳ್ಳಿ, ಮಹೇಶ ಕಂದಾರಿ, ಜಗನ್ನಾಥ ಮುನಿರಾಬಾದ್, ಆನಂದ ಕುಟ್ಟಿ, ಮೈಲಾರಪ್ಪ ಗುಡದಳ್ಳಿ, ರವಿ ಮೆದಾರ, ಮುತ್ತು ನಾಯಕ್, ಮಲ್ಲಪ್ಪ ಹಂದ್ರಾಳ, ವಿರೂಪಾಕ್ಷಗೌಡ ನರೇಗಲ್, ಸೋಮನಗೌಡ ಪಾಟೀಲ್ ಸೇರಿದಂತೆ ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.