ಒಳಜಗಳದಿಂದಲೇ ಕಾಂಗ್ರೆಸ್‌ ಸರ್ಕಾರ ಪತನ; ಮುರುಗೇಶ ನಿರಾಣಿ

| Published : Jun 04 2024, 12:32 AM IST / Updated: Jun 04 2024, 12:48 PM IST

Murugesh Nirani
ಒಳಜಗಳದಿಂದಲೇ ಕಾಂಗ್ರೆಸ್‌ ಸರ್ಕಾರ ಪತನ; ಮುರುಗೇಶ ನಿರಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರದಲ್ಲಿ ಈಗ ಒಬ್ಬರು ಡಿಸಿಎಂ ಇದ್ದು, ಮುಂದೆ ಐದು ಜನ ಡಿಸಿಎಂಗೆ ಬೇಡಿಕೆ ಹುಟ್ಟಲಿದೆ. ಹೀಗಾಗಿ ಒಳಜಗಳಗಳೇ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗಲಿವೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

 ಬಾಗಲಕೋಟೆ :  ಕಾಂಗ್ರೆಸ್ ಒಳಜಗಳದಿಂದ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿರುವ ಮಾಜಿ ಸಚಿವ ಮುರುಗೇಶ ನಿರಾಣಿ, ಕಾಂಗ್ರೆಸ್ ಸರ್ಕಾರದಲ್ಲಿ ಈಗ ಒಬ್ಬರು ಡಿಸಿಎಂ ಇದ್ದು, ಮುಂದೆ ಐದು ಜನ ಡಿಸಿಎಂಗೆ ಬೇಡಿಕೆ ಹುಟ್ಟಲಿದೆ. ಹೀಗಾಗಿ ಒಳಜಗಳಗಳೇ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗಲಿವೆ ಎಂದು ಪುನರುಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಿಜೆಪಿಗರು ಐದು ವರ್ಷ ಈ ಸರ್ಕಾರ ಒಳ್ಳೆಯ ಕೆಲಸ ಮಾಡಲಿ ಎಂದು ಬಯಸುತ್ತೇವೆ. ಐದು ವರ್ಷದ ನಂತರ ಸಮಯ ಬರುತ್ತೆ. ಜನ ಅಳೆದು ತೂಗಿ ಮತ್ತೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ. ಕ್ಷೇತ್ರಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿಎಂ ನೇತೃತ್ವದಲ್ಲೇ ಭ್ರಷ್ಟಾಚಾರ, ದುರಾಡಳಿತ ನಡೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ, ಚಂದ್ರಶೇಖರ್ ಆತ್ಮಹತ್ಯೆ ವಿಚಾರದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹100 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆಯಾಗಬೇಕು. ಪ್ರಕರಣ ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ರಾಜ್ಯ ಬಿಜೆಪಿ ವತಿಯಿಂದ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಪ್ರಕರಣ ತನಿಖೆ ಸಿಬಿಐಗೆ ವಹಿಸಿದರೆ ಎಲ್ಲವೂ ಹೊರಬೀಳಲಿದೆ ಎಂದು ಹೇಳಿದರು.

ಬಾಗಲಕೋಟೆಯಲ್ಲಿ ಮತ್ತೆ ಕಮಲ ಅರಳಲಿದೆ. ಪಕ್ಷದ ಅಭ್ಯರ್ಥಿ ಸಂಸದ ಪಿ.ಸಿ.ಗದ್ದಿಗೌಡರ ಅವರು ಐದನೇ ಬಾರಿಗೆ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.