ಕಾಂಗ್ರೆಸ್‌ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧ

| Published : Jul 14 2024, 01:31 AM IST

ಕಾಂಗ್ರೆಸ್‌ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್‌.ನಿರಂಜನ್‌ ಕುಮಾರ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಂಗ್ರೆಸ್ ಸರ್ಕಾರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ವಿಪಕ್ಷಗಳ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮುಡಾ ಹಗರಣದಲ್ಲಿ ದಾಖಲಾತಿ ಇದ್ದು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಒತ್ತಾಯಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿನೋಟಿಫಿಕೇಶನ್‌ ಆಗಿದ್ದ ಜಾಗವನ್ನು ಕಾನೂನು ಬಹಿರವಾಗಿ ಪಡೆದು, ನಂತರ ಮೂಡಾಕ್ಕೆ ಜಮೀನು ನೀಡಿ, ನಂತರ ಬೆಲೆ ಬಾಳುವ ಜಾಗವನ್ನು ನಿಯಮಬಾಹಿರವಾಗಿ ಪಡೆಯುವ ಮೂಲಕ ಅಕ್ರಮ ಎಸಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಜೊತೆಗೆ ಅಕ್ರಮದಲ್ಲಿ ಭಾಗಿಯಾಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ ಗ್ಯಾರಂಟಿ ಯೋಜನೆಗಳಿಗೆ ಎಸ್‌ಇಪಿ. ಟಿಎಸ್‌ಪಿ ಅನುದಾನ ಬಳಕೆ ಮಾಡಿರುವುದು ಸರಿಯಲ್ಲ. ಜೊತೆಗೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣ ಕುರಿತು ಸಚಿವ ಎಚ್.ಸಿ.ಮಹದೇವಪ್ಪ ಇದುವರಗೆ ಮಾತನಾಡಿಲ್ಲ. ಅವರ ನಿರ್ದೇಶನದ ಮೇರೆಗೆ ಈ ಹಗರಣ ನಡೆದಿದ್ದು ಅವರು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಸಿಎಂ ಕೊಡುಗೆ ಶೂನ್ಯ: ಒಂದೂವರೆ ವರ್ಷದಲ್ಲಿ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4 ಬಾರಿ ಬಂದು ಹೋದರಲ್ಲ. ಜಿಲ್ಲೆಗೆ ಹೊಸದಾಗಿ ಯಾವ ಯೋಜನೆ ಜಾರಿಗೆ ತಂದರು ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದಾಗ ನಾನು ಅಷ್ಟು ಬಾರಿ ಬಂದೆ, ಇಷ್ಟು ಬಾರಿ ಬಂದೆ ಅನ್ನುತ್ತಾರಲ್ಲಾ, ಈ ಕಳೆದ ಒಂದೂವರೆ ವರ್ಷದಲ್ಲಿ ಜಿಲ್ಲೆಗೆ ಅವರ ಕೊಡುಗೆ ಏನು?, ಯಾವ ಯಾವ ಹೊಸ ಯೋಜನೆಗಳನ್ನು ತಂದಿದ್ದಾರೆ. ಜನರು ಇವರ ಮೇಲೆ ನಂಬಿಕೆ ಇಟ್ಟು ಎಂಎಲ್‌ಎ ಹಾಗೂ ಎಂಪಿಯನ್ನು ಗೆಲ್ಲಿಸಿದರು. ಆದರೆ, ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೊಡುಗೆ ಶೂನ್ಯ ಎಂದು ಲೇವಡಿ ಮಾಡಿದರು.

ರೈತರ ಬಗ್ಗೆ ಕಾಳಜಿ ಇಲ್ಲ: ಜು.10 ರಂದು ಜಿಲ್ಲೆಗೆ ಆಗಮಿಸಿದ್ದ ವೇಳೆ ರೈತರು ತಮ್ಮ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಅಹವಾಲುಗಳನ್ನು ಕಸದಂತೆ ಬಿಸಾಡಿ ಹೋಗಿರುವುದು ನಿಮಗೆ ಜನರ ಮೇಲೆ ಎಷ್ಟರ ಮಟ್ಟಿಗೆ ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ. ಸಿದ್ದರಾಮಯ್ಯ ಅವರು ಜನರ ಮೇಲೆ ಉಡಾಫೆ, ರೈತರ ಮೇಲೆ ಉದಾಸೀನ ಮಾಡಿದ್ದಾರೆ. ಇವರಿಗೆ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರ ಮೇಲೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡಿಸುತ್ತೇವೆ ಎಂದು ಭರವಸೆ ನೀಡಿ, ಈಗ ಅವರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿದ್ದಲ್ಲದೇ, ಅವರಿಗೆ ಸರಿಯಾಗಿ ವೇತನವನ್ನು ನೀಡುತ್ತಿಲ್ಲ, ಇದೇನಾ ನಿಮ್ಮ ನುಡಿದಂತೆ ನಡೆದ ಸರ್ಕಾರ. ನೀವು ಕೊಟ್ಟಿರುವ ಮಾತಿನಂತೆ ಕಾಯಂ ಉದ್ಯೋಗವನ್ನು ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮುಖಂಡರಾದ ನೂರೊಂದುಶೆಟ್ಟಿ, ಸಿ.ಎನ್.ಬಾಲರಾಜು, ಜಯಸುಂದರ್, ಮಂಜುನಾಥ್ ಇದ್ದರು.