ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಂಡ ನೇಕಾರಿಕೆ ಉತ್ತೇಜಕ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸಹಕಾರಿ ನೂಲಿನ ಗಿರಣಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನೇಕಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಚ ಗ್ಯಾರಂಟಿಗಳ ಹೆಸರಲ್ಲಿ ದರೋಡೆ ನಡೆಯುತ್ತಿದೆ. ರಾಜ್ಯದ ಜನತೆ ಇಟ್ಟಿದ್ದ ನಿರೀಕ್ಷೆಗಳನ್ನು ಕಾಂಗ್ರೆಸ್ ಹುಸಿಗೊಳಿಸಿದ್ದು, ಜನ ವಿರೋಧಿ ತುಘಲಕ್ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರ ಓಲೈಕೆ ಭರಾಟೆಯಲ್ಲಿ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದ ಜನತೆಯ ನ್ಯಾಯಯುತ ಯೋಜನೆಗಳಿಗೆ ತಿಲಾಂಜಲಿ ನೀಡಿದೆ. ಈ ಮೂಲಕ ಬಡವರ, ದಲಿತರ, ಹಿಂದುಳಿದವರ ಜೀವನ ನರಕವಾಗಿಸಿದ ಶ್ರೇಯಸ್ಸು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಿಡಿಕಾರಿದರು. ನೇಕಾರರ ಮನೆಯಲ್ಲಿ ಊಟ ಸವಿದ ಬಿವೈವಿ:ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ನೇಕಾರ ಶಾಂತವೀರ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಂತವೀರ ಅವರ ಕುಟುಂಬ ಸದಸ್ಯರೊಂದಿಗೆ ಕೂತು ಭೋಜನ ಸ್ವೀಕರಿಸಿದರು. ಬಳಿಕ ಇಲ್ಲಿನ ನೇಕಾರಿಕೆ ಮಗ್ಗಗಳಿಗೆ ಭೇಟಿ ನೀಡಿದ ವಿಜಯೇಂದ್ರ, ನೇಕಾರರ ಸವಾಲುಗಳು ಹಾಗೂ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.