ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಜನಪಯೋಗಿ ಯೋಜನೆಗಳ ಕುರಿತಾದ ಮಾಹಿತಿಯನ್ನು ಪ್ರಚಾರ ಸಮಿತಿ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳಿಗೆ ಒದಗಿಸಿಕೊಡುವ ಉದ್ದೇಶದಿಂದ ಮಾ.8 ರಂದು ವಿಜಯಪುರದಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಡಾ.ಶರಣಪ್ಪ ಕೊಟಗಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ತಳಹದಿಯಲ್ಲಿ ಕಾಂಗ್ರೆಸ್ ಪಕ್ಷವು ಸುದೀರ್ಘ 140 ವರ್ಷ ಇತಿಹಾಸ ಹೊಂದಿದೆ. ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಜನಪಯುಕ್ತ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ. ನಮ್ಮ ಪಕ್ಷವು ಇದುವರೆಗೂ ಕೈಗೊಂಡಿರುವ ಜನಪಯುಕ್ತ ಕಾರ್ಯಕ್ರಮಗಳ ಮಾಹಿತಿ ಸೇರಿದಂತೆ ಪ್ರಸ್ತುತ ಸರ್ಕಾರ ಕೈಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತು ನಮ್ಮ ಪ್ರಚಾರ ಸಮಿತಿ ಪದಾಧಿಕಾರಿಗಳಿಗೆ, ವಿವಿಧ ಸಮಿತಿಯ ಪದಾಧಿಕಾರಿಗಳಿಗೆ ಕಾರ್ಯಾಗಾರದಲ್ಲಿ ನೀಡಲಾಗುತ್ತದೆ ಎಂದು ವಿವರಿಸಿದರು. ಈ ಕಾರ್ಯಾಗಾರದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲೆಯ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ತಿನ ಸದಸ್ಯರು, ವಿಧಾನಸಭೆ ಸದಸ್ಯರು ಉಪಸ್ಥಿತರಿರುವರು. ಜಿಲ್ಲೆಯಲ್ಲಿರುವ 17 ಬ್ಲಾಕ್ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆ ಮಾಡಿದ ಘೋಷಣೆಗಳನ್ನು ಜಾರಿಗೆ ತರುವ ಜೊತೆಗೆ ಸಂವಿಧಾನದ ವಿರುದ್ಧ ನಡೆಯುವ ಚಟುವಟಿಕೆಗಳ ಕುರಿತಾಗಿಯೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿಕೊಂಡಿರುವ ಒಪ್ಪಂದ ಸರಿಯಾದ ಕ್ರಮವಲ್ಲ. ಇದೊಂದು ಮಾರಕವಾಗಿದೆ. ಯಾವುದೇ ಒಪ್ಪಂದ ಮಾಡಕೊಳ್ಳಬೇಕಾದರೇ ಅಧಿವೇಶನದಲ್ಲಿ ಈ ಕುರಿತಾದ ಚರ್ಚೆ ಮಾಡುವ ಅಗತ್ಯವಿದೆ. ಅನುಮೋದನೆ ಪಡೆದುಕೊಂಡ ನಂತರ ಒಪ್ಪಂದ ಮಾಡಿಕೊಳ್ಳುವದು ಸೂಕ್ತವಾಗಿದೆ. ಈ ಯಾವುದೇ ಪ್ರಕ್ರಿಯೆಗಳು ಇಲ್ಲಿ ನಡೆಯದೇ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.ಕೇಂದ್ರ ಸರ್ಕಾರವು ಸಂವಿಧಾನತ್ಮಕವಾಗಿ ಕೈಗೊಳ್ಳುವ ವಿರೋಧಿ ಚಟುವಟಿಕೆಗಳು ಗೊತ್ತಿರುವ ಸಂಗತಿ. ಕೋವಿಡ್ ಕಾಲದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಾಮಾನ್ಯ ಜನರು ಸೇರಿದಂತೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹಣ ನೀಡಿದ್ದಾರೆ. ಇದರಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರವಾಗಿದೆ. ಇದರ ಬಗ್ಗೆ ಜನರಿಗೆ ಕೇಂದ್ರ ಸರ್ಕಾರ ಲೆಕ್ಕ ಕೊಡಬೇಕಿದೆ. ಈ ನಿಧಿಗೆ ನೀಡಿದ ಹಣದ ವಿವರವನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಕೇಳಿದರೂ ವಿವರ ಕೊಟ್ಟಿಲ್ಲ. ಮಾಹಿತಿ ಹಕ್ಕಿನಲ್ಲಿಯೂ ಕೇಳಿದರೂ ಕೊಟ್ಟಿಲ್ಲ. ಇದರ ಬಗ್ಗೆ ಯಾರಿಗೂ ಲೆಕ್ಕ ಕೇಳುವ ಹಕ್ಕು ಇಲ್ಲ ಎಂದು ಅಧಿವೇಶನದಲ್ಲಿ ಕಾಯ್ದೆ ಸಹ ಜಾರಿಗೆ ತಂದಿದೆ. ಇದು ಸರಿಯಾದ ಕ್ರಮವಲ್ಲ. ದೇಶಕ್ಕೆ ಪ್ರಧಾನ ಮಂತ್ರಿ ಇದ್ದಾರೆ, ಹೊರತು ಯಾವುದೇ ಒಂದು ಪಕ್ಷಕ್ಕೆ ಪ್ರಧಾನ ಮಂತ್ರಿಯಲ್ಲ ಎಂಬುವುದನ್ನು ಅರಿತುಕೊಳ್ಳಬೇಕಿದೆ. ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ ಆಗಿದೆ. ನಾವು ಮತದಾನ ಹಕ್ಕು ಕಳೆದುಕೊಂಡರೆ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಸಂಯೋಜಕ ಮಹಾಬಳೇಶ್ವರ ಜಿ.ಎಸ್, ಮತಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿದರು.ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ.ಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸರ್ಪರಾಜ ಮಿರ್ದೆ, ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಭಾಗ್ಯರಾಜ ಸೊನ್ನದ, ಪ್ರದೀಪ ಜಾನಕರ, ದ್ಯಾವನಗೌಡ ಪಾಟೀಲ, ಗದಗದ ಜಿಲ್ಲೆಯ ಶಿವಯೋಗಿ ಬೆಂಡೆಗಾರ, ವಿವಿಧ ಸಮಿತಿಯ ಪದಾಧಿಕಾರಿಗಳಾದ ಸುರೇಶಗೌಡ ಪಾಟೀಲ, ಜಟ್ಟಿಂಗರಾಯ ಮಾಲಗಾರ, ಶೇಖರ ಗೊಳಸಂಗಿ, ಕಮಲಸಾಬ್‌ ಕೊರಬು, ರಮಜಾನ್‌ ಹೆಬ್ಬಾಳ, ಪರಶುರಾಮ ಜಮಖಂಡಿ, ಜಗದೇವಿ ಗುಂಡಳ್ಳಿ, ಕಮಲಾ ಗೊಳಸಂಗಿ, ಪ್ರವೀಣ ಪೂಜಾರಿ, ಶಫೀಕ್‌ ಹೊಕ್ರಾಣಿ, ತಮ್ಮಣ್ಣ ಕಾನಾಗಡ್ಡಿ, ಬಸಲಿಂಗ ನಂದಿ, ಬಾಬು ಕೆಂಬಾವಿ, ಮುತ್ತು ಗುಂಡಳ್ಳಿ ಇತರರು ಇದ್ದರು.ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಚುನಾವಣೆ ಮುನ್ನ ಘೋಷಣೆ ಮಾಡಿದ್ದ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಜೊತೆಗೆ ಅನೇಕ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಗೆ ನಿರಂತರ ಸರ್ಕಾರ ಶ್ರಮಿಸುತ್ತಿದೆ.

-ಡಾ.ಶರಣಪ್ಪ ಕೊಟಗಿ, ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರು.