ಸಾರಾಂಶ
- ಹರೋನಹಳ್ಳಿ ಶಾಲೆಯಲ್ಲಿ ಊಟದ ಕೊಠಡಿ ಉದ್ಘಾಟಿಸಿ ಶಾಸಕ ಬಸವರಾಜ ಶಿವಗಂಗಾ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಯ ಪರ್ವವೇ ಆರಂಭಗೊಂಡಿದೆ. ಚುನಾವಣೆಯ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸುವ ಜೊತೆಗೆ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.ತಾಲೂಕಿನ ಹರೋನಹಳ್ಳಿಯಲ್ಲಿ 2023- 2024ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ₹16.70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಊಟದ ಕೊಠಡಿಯ ಉದ್ಘಾಟನೆ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ₹16 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಂಥಾಲಯ ಕಟ್ಟಡದ ಉದ್ಘಾಟನೆ ಹಾಗೂ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ₹20 ಲಕ್ಷ ವೆಚ್ಚದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಜನತೆ ಶ್ರೇಯೋಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಕಂಕಣಬದ್ಧವಾಗಿದೆ. ಸಾಮಾನ್ಯ ಜನರು ನೆಮ್ಮದಿಯಿಂದ ಜೀವಿಸಲು ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಬದ್ಧ, ಗ್ರಾಮದ ವಿದ್ಯಾವಂತ ಯುವಜನತೆಗೆ ಓದಲು ಸುಸಜ್ಜಿತ ಗ್ರಂಥಾಲಯವನ್ನು ಈ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಬೇಕಾದ ಉತ್ತಮ ಪುಸ್ತಕಗಳು, ಕಂಪ್ಯೂಟರ್ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುತ್ತೇನೆ ಎಂದರು.ಗ್ರಾಮದ ಮುಖಂಡ ಹರೋನಹಳ್ಳಿ ವಿಜಿಗೌಡ ಮಾತನಾಡಿ, ಶಾಸಕ ಶಿವಗಂಗಾ ಬಸವರಾಜ್ ನೇತೃತ್ವದಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಪಕ್ಷಾತೀತ, ಜಾತ್ಯತೀತವಾಗಿ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತೀರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಮಲಹಾಳ್ ಶಶಿಕುಮಾರ್, ಪ್ರಕಾಶ್, ಯಶವಂತ್, ಶೋಭಾ, ಶೃತಿ, ಹರೀಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.- - - -15ಕೆಸಿಎನ್‌ಜಿ1.ಜೆಪಿಜಿ: ಚನ್ನಗಿರಿ ತಾಲೂಕಿನ ಹರೋನಹಳ್ಳಿಯಲ್ಲಿ ₹20 ಲಕ್ಷ ವೆಚ್ಚದ ಸಿ.ಸಿ. ರಸ್ತೆಗೆ ಶಾಸಕ ಬಸವರಾಜ ವಿ.ಶಿವಗಂಗಾ ಗುದ್ದಲಿ ಪೂಜೆ ನೆರವೇರಿಸಿದರು.
-16ಕೆಸಿಎನ್‌ಜಿ2: ಹೈಟೆಕ್ ಊಟದ ಕೊಠಡಿಯನ್ನು ಶಾಸಕ ಬಸವರಾಜ ವಿ.ಶಿವಗಂಗಾ ಉದ್ಘಾಟಿಸಿದರು.