ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ತಪ್ಪಲ್ಲ: ಆನಂದಸ್ವಾಮಿ ಗಡ್ಡದೇವರಮಠ

| Published : Apr 23 2024, 01:49 AM IST

ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ತಪ್ಪಲ್ಲ: ಆನಂದಸ್ವಾಮಿ ಗಡ್ಡದೇವರಮಠ
Share this Article
  • FB
  • TW
  • Linkdin
  • Email

ಸಾರಾಂಶ

5 ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೊಳಿಸುವ ಮೂಲಕ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಿದೆ ಎಂದು ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಮುಂಡರಗಿ

ನಮ್ಮ ಕಾಂಗ್ರೆಸ್ ಸರ್ಕಾರ ಎಂದಿಗೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ವಿಧಾನಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ 5 ಗ್ಯಾರಂಟಿಗಳನ್ನು ತಕ್ಷಣವೇ ಜಾರಿಗೊಳಿಸುವ ಮೂಲಕ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಿದೆ ಎಂದು ಹಾವೇರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಸೋಮವಾರ ಮುಂಡರಗಿ ಪಟ್ಟಣದಲ್ಲಿ ರೋಡ್‌ಶೋ ಮೂಲಕ ಮತಯಾಚನೆ ಮಾಡಿದ ಅವರು, ಈ ಬಾರಿ ಮತ್ತೆ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಈ ಹಿಂದೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾಡಿದಂತೆ ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಜತೆಗೆ ರೈತರ ಆದಾಯ ದ್ವಿಗುಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಲೋಕಸಭೆಯಲ್ಲಿ ಈ ಭಾಗದಲ್ಲಿ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಕುರಿತು ಕೆಲಸ ಮಾಡುವುದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದ್ದು, ಮೇ 7ರಂದು ನನಗೆ ಮತ ನೀಡುವ ಮೂಲಕ ಆರಿಸಿತರಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, 2014 ಮತ್ತು 2019ರಲ್ಲಿ ದೇಶದ ಜನತೆ ಇಂದಿನ ಪ್ರಧಾನಿಯವರ ಸುಳ್ಳು ಭರವಸೆಗೆ ಕಟ್ಟುಬಿದ್ದು ವೋಟು ಹಾಕಿದ್ದಾರೆ. ನಮ್ಮದು ಶಾಂತಿಪ್ರಿಯ ದೇಶ. ಆದರೆ, ಇಂದು ದೇಶದಲ್ಲಿ ಅಶಾಂತಿ ಸೖಷ್ಟಿಯಾಗುತ್ತಿದೆ. ಮನಸ್ಸುಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ. ದೇಶದಲ್ಲಿ ಅಭಿವೃದ್ಧಿ ಪರಚಿಂತನೆ ಹೇಳಿ ಮತ ಕೇಳುತ್ತಿಲ್ಲ. ಬೆಂಗಳೂರಿನಲ್ಲಿ ನೀರಿನ ಕೊರತೆ ಕುರಿತು ಮಾತನಾಡುವ ಮೋದಿ ಅವರು, ದೇಶದ ಜನತೆಗೆ ನೀರು ಕೊಡುವುದು ತಮ್ಮದೂ ಜವಾಬ್ದಾರಿ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.

ಏ. 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗಜೇಂದ್ರಗಡಕ್ಕೆ ಆಗಮಿಸಿ ಹಾವೇರಿ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ರಾಮಚಂದ್ರ ಕಲಾಲ್, ನಾಗರಾಜ ಹೊಂಬಳಗಟ್ಟಿ ಸೇರಿದಂತೆ ಅನೇಕರು ಮಾತನಾಡಿದರು. ವೈ.ಎನ್. ಗೌಡರ್, ವಿ.ಎಲ್. ನಾಡಗೌಡ್ರ, ಎಸ್.ಡಿ. ಮಕಾಂದಾರ, ವಾಸಣ್ಣ ಕುರುಡಗಿ, ಶೋಭಾ ಮೇಟಿ, ಹೇಮಂತಗೌಡ ಪಾಟೀಲ, ರುದ್ರಗೌಡ ಪಾಟೀಲ, ಶೇಖರ ಜುಟ್ಲನ್ನವರ, ಅಂದಾನಗೌಡ ಪಾಟೀಲ, ಸೀತಾ ಬಸಾಪುರ, ಡಿ.ಎಂ. ಕಾತರಕಿ, ಸುರೇಶ ಮಾಗಡಿ, ಎಂ.ಯು. ಮಕಾಂದಾರ, ಡಾ. ಬಿ.ಎಸ್. ಮೇಟಿ, ಮಂಜುನಾಥ ಮುಂಡವಾಡ, ಧ್ರುವಕುಮಾರ ಹೊಸಮನಿ, ಸುರೇಶ ಕ್ಯಾದಿಗಿಹಳ್ಳಿ, ರಾಘವೇಂದ್ರ ಕುರಿಯವರ, ಭುವನೇಶ್ವರಿ ಕಲ್ಲಕುಟಗರ್, ದಾನೇಶ್ವರಿ ಭಜಂತ್ರಿ, ಜ್ಯೋತಿ ಕುರಿಯವರ, ಪ್ರತಿಭಾ ಹೊಸಮನಿ ಉಪಸ್ಥಿತರಿದ್ದರು.

ಪಟ್ಟಣದ ಗಣೇಶ ದೇವಸ್ಥಾನದ ಎದುರಿನಿಂದ ಪ್ರಾರಂಭವಾದ ರೋಡ್ ಶೋ ಬಸ್ ನಿಲ್ದಾಣ, ಅಂಬಾ ಭವಾನಿ ನಗರ, ಮಾಬೂಸುಬಾನಿ ನಗರ, ಬಜಾರ, ಗಾಂಧಿ ವೃತ್ತದ ಮೂಲಕ ಜಾಗೃತಿ ವೃತ್ತಕ್ಕೆ ತೆರಳಿ ಅಲ್ಲಿಂದ ಕೊಪ್ಪಳ ವೃತ್ತಕ್ಕೆ ಬಂದು ಅಲ್ಲಿಂದ ಕೋಟೆ ಭಾಗದ ಹತ್ತಿರ ಮುಕ್ತಾಯಗೊಂಡಿತು.