ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಲಾಭಿಗೆ ತಲೆಬಾಗಿದ್ದು, ಈ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರವೇಶ ಕಡ್ಡಾಯ ನಿಯಮವನ್ನು ರದ್ದುಗೊಳಿಸಿದೆ ಎಂದು ಮಾಜಿ ಶಾಸಕ ಅರುಣ್ ಶಹಾಪುರ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಲಾಭಿಗೆ ತಲೆಬಾಗಿದ್ದು, ಈ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರವೇಶ ಕಡ್ಡಾಯ ನಿಯಮವನ್ನು ರದ್ದುಗೊಳಿಸಿದೆ ಎಂದು ಮಾಜಿ ಶಾಸಕ ಅರುಣ್ ಶಹಾಪುರ ಆರೋಪಿಸಿದ್ದಾರೆ.ಅವರು ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಅಹಿಂದ ಪರ ಎನ್ನುವ ರಾಜ್ಯ ಸರ್ಕಾರ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪ್ರವೇಶ ಅಗತ್ಯವಿಲ್ಲ ಎನ್ನುವ ಮೂಲಕ ಈ ಸಂಸ್ಥೆಗಳಲ್ಲಿ ಪ್ರವೇಶ ನೀಡುವ ಸಂಪೂರ್ಣ ಅಧಿಕಾರವನ್ನು ಆಡಳಿತ ಮಂಡಳಿಗೆ ನೀಡಿ, ಅಹಿಂದ ವಿದ್ಯಾರ್ಥಿಗಳ ಮೀಸಲಾತಿಯನ್ನೂ ರದ್ದುಗೊಳಿಸಿದೆ. ಈ ಮೂಲಕ ಎಸ್.ಸಿ./ಎಸ್.ಟಿ, ದಲಿತ ವಿದ್ಯಾರ್ಥಿಗಳಿಗೆ ದ್ರೋಹ ಬಗೆದಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣ ಹಕ್ಕು ಕಾಯ್ದೆಯನ್ನೂ ಉಲ್ಲಂಘಿಸಿದೆ ಎಂದು ಆರೋಪಿಸಿದ ಅವರು, ಶಿಕ್ಷಣ ಸಂಸ್ಥೆಗಳು ಮಕ್ಕಳ ಆಧಾರಿತ ಆಗಿರಬೇಕೇ ಹೊರತು ಆಡಳಿತ ಮಂಡಳಿ ಆಧಾರಿತವಾಗಿರಬಾರದು ಎಂದು ಆಗ್ರಹಿಸಿದರು.ಕಾಂಗ್ರೆಸ್ ಸರ್ಕಾರ ಗದಗ್‌ನ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯನ್ನು ರಾಜ್ಯಪಾಲರಿಂದ ಕಿತ್ತುಕೊಂಡು, ಮುಖ್ಯಮಂತ್ರಿಗಳಿಗೆ ನೀಡುವ ಹುನ್ನಾರ ನಡೆಸುತ್ತಿದೆ. ಇದು ವಿ.ವಿ.ಗಳಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಕಾರಣವಾಗುತ್ತದೆ. ಆದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿಗೆ ಅವಕಾಶ ನೀಡಬಾರದು ಎಂದರು.ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಯಲ್ಲಿ ತನಗೆ ಕುರ್ಚಿ ನೀಡಲಿಲ್ಲ ಎಂದು ಇನ್ನೂ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸದಿರುವ ಯಾಸೀರ್ ಅಹಮ್ಮದ್ ಖಾನ್ ಪಠಾಣ್ ಅವರು, ಗೂಂಡಾಗಿರಿ ನಡೆಸಿ, ಉಪಕುಲಾಧಿಪತಿಗೆ ಬೆದರಿಕೆ ಒಡ್ಡಿದ್ದಾರೆ. ಸರ್ಕಾರ ಅವರ ಮತ್ತು ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸಬೇಕು ಎಂದವರು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ, ಜಿ.ಪ್ರ.ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.