ಸಾರಾಂಶ
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೋಮಾ ಸ್ಥಿತಿಯಲ್ಲಿದ್ದು, ತಾನಾಗಿಯೇ ಜೀವ ಕಳೆದುಕೊಳ್ಳುವ ಸರ್ಕಾರವನ್ನು ಆಪರೇಷನ್ ಕಮಲ ಮಾಡಿ ಸಾಯಿಸುವ ಅಗತ್ಯವಿಲ್ಲ. ಅಕ್ಟೋಬರ್ ವೇಳೆಗೆ ಈ ಸರ್ಕಾರ ಸಾಯುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ
ಮಂಡ್ಯ : ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೋಮಾ ಸ್ಥಿತಿಯಲ್ಲಿದ್ದು, ತಾನಾಗಿಯೇ ಜೀವ ಕಳೆದುಕೊಳ್ಳುವ ಸರ್ಕಾರವನ್ನು ಆಪರೇಷನ್ ಕಮಲ ಮಾಡಿ ಸಾಯಿಸುವ ಅಗತ್ಯವಿಲ್ಲ. ಅಕ್ಟೋಬರ್ ವೇಳೆಗೆ ಈ ಸರ್ಕಾರ ಸಾಯುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭವಿಷ್ಯ ನುಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವೂ ಪಕ್ಷಾಂತರ ಮಾಡಲ್ಲ. ನಮ್ಮ ಪಕ್ಷಕ್ಕೆ ಕಾಂಗ್ರೆಸ್‌ನವರನ್ನೂ ಕರೆದುಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ರೀತಿ ನಾವು ಮಾಡಲ್ಲ. ಜನರೇ ಈ ಸರ್ಕಾರವನ್ನು ತಿರಸ್ಕಾರ ಮಾಡಿದ್ದು, ತಾನಾಗಿಯೇ ಬಿದ್ದು ಸಾಯುತ್ತದೆ. ಡಾಕ್ಟರ್ ಸತ್ತೋಗಿದೆ ಎಂದು ಅನೌನ್ಸ್ ಮಾಡಿದಾಗ ನಾವು ಪ್ರವೇಶ ಮಾಡುತ್ತೇವೆ ಎಂದು ವ್ಯಂಗ್ಯವಾಡಿದರು.
ಅಶೋಕ್ ಹತ್ತಿರ ಜ್ಯೋತಿಷ್ಯ ಕೇಳ್ತೀನಿ ಎಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇನ್ನೂ ಸಹ ಡಿ.ಕೆ.ಶಿವಕುಮಾರ್ ಜ್ಯೋತಿಷ್ಯ ಕೇಳೋಕೆ ನನ್ನ ಬಳಿಗೆ ಬಂದಿಲ್ಲ. ನನ್ನ ಜ್ಯೋತಿಷ್ಯ ನಿಜ ಅಲ್ಲ ಅಂದಿದ್ದರೆ ಸುರ್ಜೇವಾಲಾ ಪದೇ ಪದೇ ಯಾಕೆ ಕರ್ನಾಟಕಕ್ಕೆ ಬರಬೇಕು?. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪದೇ ಪದೇ ದೆಹಲಿಗೆ ಯಾಕೆ ಹೋಗಬೇಕು?. ಇದರಿಂದ ನಾನು ಹೇಳುವುದು ಸತ್ಯ ಎಂದು ಅರ್ಥ ಆಗುತ್ತದೆ ಎಂದರು. ತಾನಾಗಿಯೇ ಜೀವ ಕಳೆದುಕೊಳ್ಳುವ ಸರ್ಕಾರಕ್ಕೆ ನಾವು ಏಕೆ ಆಪರೇಷನ್ ಕಮಲ ಮಾಡಬೇಕು.
ಕಾಂಗ್ರೆಸ್‌ನಲ್ಲಿ ಅಲ್ಲೊಲ್ಲ ಕಲ್ಲೊಲ್ಲ:
ಕಾಂಗ್ರೆಸ್ ಶಾಸಕರೇ ಒಪ್ಪಂದ ಆಗಿದ್ದರೆ ಸಿಎಂ ಸ್ಥಾನ ಬಿಟ್ಟು ಕೊಡಲಿ ಎನ್ನುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ. ಆ ಬೆಂಕಿಯಲ್ಲಿ ಯಾರು ಸುಟ್ಟು ಹೋಗುವರೋ, ಯಾರು ಆಚೆ ಬರುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಸಹ ಘಟಾನುಘಟಿಗಳೆ. ಇವರು ಛಲ ಬಿಡಲ್ಲ, ಅವರು ಹಠ ಬಿಡೊಲ್ಲ. ಒಪ್ಪಂದ ಆಗಿರುವ ಡಿಕೆಶಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು. ಬಿಟ್ಟುಕೊಡದಿದ್ದರೆ ಕಾಂಗ್ರೆಸ್‌ನಲ್ಲಿ ಅಲ್ಲೊಲ್ಲ ಕಲ್ಲೊಲ್ಲ ಸೃಷ್ಟಿಯಾಗಿ ಸರ್ಕಾರನೇ ಪತನ ಆಗಬಹುದು ಎಂದರು.