ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಪತನವಾಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಬಿಜೆಪಿ ಮಾಜಿ ಸಚಿವ ಹೊನ್ನಾಳಿ ಎಂ.ಪಿ. ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 5 ಗ್ಯಾರಂಟಿ ಯೋಜನೆ ಹಾಗೂ ಭರವಸೆಗಳೂ ನಿಲ್ಲಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಪತನವಾಗಲಿದೆ ಎಂದರು. ಗ್ಯಾರಂಟಿ ಬಗ್ಗೆ ಕಾಂಗ್ರೆಸ್ ಸರ್ಕಾರವೇ ಗೊಂದಲದಲ್ಲಿದೆ. ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿಯೂ ಹಣ ಬಿಡುಗಡೆಯಾಗಿಲ್ಲ. ಒಂದೇ ಒಂದು ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಡಿಯಲ್ಲೇ ಮುಡಾ ಸೈಟ್ ಹಗರಣ ನಡೆದಿದೆ. ಆದರೂ ಸಿದ್ದರಾಮಯ್ಯ ಭಂಡತನದಲ್ಲಿದ್ದಾರೆ. ವಾಲ್ಮೀಕಿ ಅಬಿವೃದ್ಧಿ ನಿಗಮದಲ್ಲಿ ₹183 ಕೋಟಿ ಹಗರಣ ನಡೆದಿದೆ. ರಾಜ್ಯದ ಇತಿಹಾಸದಲ್ಲೇ ಅಭಿವೃದ್ಧಿ ನಿಗಮದ ಹಣವನ್ನು ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿನ್ನಾಭರಣ ಅಂಗಡಿಗಳಿಗೆ ವರ್ಗಾವಣೆ ಮಾಡಲಾಗಿದೆ. ಮುಂಚೆ ಏನೂ ಆಗೇ ಇಲ್ಲವೆನ್ನುತ್ತಿದ್ದ ಸಿದ್ದರಾಮಯ್ಯನವರು ಕಡೆಗೆ ಸಚಿವ ಬಿ.ನಾಗೇಂದ್ರ ರಾಜಿನಾಮೆ ಪಡೆದರು ಎಂದು ಟೀಕಿಸಿದರು.ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಸಚಿವ ಬಿ.ನಾಗೇಂದ್ರ, ಬಸವರಾಜ ದದ್ದಲ್ ಹೆಸರೇ ಇಲ್ಲ. ಹಾಗಾಗಿ ಎರಡೂ ಹಗರಣಗಳನ್ನು ಪಾರದರ್ಶಕ ತನಿಖೆಗಾಗಿ ಸಿಪಿಐಗೆ ಒಪ್ಪಿಸಬೇಕು. ಇಂತಹಕೆಟ್ಟ ಸರ್ಕಾರವನ್ನು ರಾಜ್ಯದ ಜನತೆಗೆ ಎಂದಿಗೂ ನೋಡಿರಲಿಲ್ಲ. ಅಂತಹ ಕೆಟ್ಟ ಆಡಳಿತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸುತ್ತಿದ್ದಾರೆ ಎಂದು ಕುಟುಕಿಸಿದರು.
ಬಿಜೆಪಿ ಮುಖಂಡರಾದ ಕೂಲಂಬಿ ಬಸವರಾಜಪ್ಪ, ರಾಜು ಈರಣ್ಣ, ದಯಾನಂದ, ಪ್ರವೀಣ ಜಾಧವ್ ಇತರರು ಇದ್ದರು.ಡ್ಯಾಂ ಗೇಟ್ ಮುರಿದಿದ್ದು, ಎಚ್ಚರಿಕೆ ಗಂಟೆದೊಡ್ಡ ಜಲಾಶಯಗಳಲ್ಲೊಂದಾದ ತುಂಗಭದ್ರಾ ಜಲಾಶಯದ ಗೇಟ್ ಮುರಿದಿರುವುದು ರಾಜ್ಯದ ಇತರೆ ಎಲ್ಲಾ ಜಲಾಶಯಗಳಿಗೂ ಎಚ್ಚರಿಕೆ ಗಂಟೆಯಾಗಿದೆ. ದಾವಣಗೆರೆ ಸೇರಿ ಮಧ್ಯ ಕರ್ನಾಟಕದ ಜಿಲ್ಲೆಗಳ ಜೀವನಾಡಿ ಭದ್ರಾ ಜಲಾಶಯದಲ್ಲಿ ರಿವರ್ ಸ್ಲ್ಯೂಯಿಸ್ ಗೇಟ್‌ಗೆ ರಬ್ಬರ್ ಹಾಕಿಲ್ಲ. ತುರ್ತು ಗೇಟ್‌ನಲ್ಲಿ ಕಾಂಕ್ರೀಟ್ ಹಾಕಿಲ್ಲ. ಬಿಜೆಪಿ ರೈತ ಪರ ಹೋರಾಟ ನಡೆಸಿದ್ದಕ್ಕೆ ತರಾತುರಿಯಿಂದ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಹೊನ್ನಾಳಿ ಎಂ.ಪಿ. ರೇಣುಕಾಚಾರ್ಯ ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಮನವಿ ಮೇರೆಗೆ ತಾತ್ಕಾಲಿಕವಾಗಿ ರಸ್ತೆ ತಡೆ, ಹೋರಾಟ ನಿಲ್ಲಿಸಲಾಗಿದೆಯಷ್ಟೇ. ಶೀಘ್ರವೇ ರೈತರೊಂದಿಗೆ ಲಕ್ಕವಳ್ಳಿಯ ಭದ್ರಾ ಜಲಾಶಯ ಗಾಜನೂರಿನ ತುಂಗಾ ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತೇವೆ. ಅಷ್ಟರೊಳಗೆ ಸರ್ಕಾರವು ಉಭಯ ಜಲಾಶಯಗಳಲ್ಲಿ ಶಾಶ್ವತ ಭದ್ರತಾ ಕಾಮಗಾರಿ ಮಾಡಿಸಬೇಕು. ಒಂದು ವೇಳೆ ಉದಾಸೀನ ಮಾಡಿದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.